SRH vs RR: 20 ಓವರ್ 286 ರನ್; ಎದುರಾಳಿ ತಂಡಗಳಿಗೆ ಎಚ್ಚರಿಕೆ ಸಂದೇಶ ಕೊಟ್ಟ ಸನ್‌ರೈಸರ್ಸ್ ಹೈದರಾಬಾದ್
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಯ ಎರಡನೇ ಪಂದ್ಯದಲ್ಲೇ ಸನ್‌ರೈಸರ್ಸ್ ಹೈದರಾಬಾದ್ ಉಳಿದ ಎಲ್ಲಾ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಕಳೆದ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಸಾಕಷ್ಟು ದಾಖಲೆ ಬರೆದಿದ್ದು ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿ ಮತ್ತಷ್ಟು ದಾಖಲೆಗಳನ್ನು ಬರೆಯುವ ಮುನ್ಸೂಚನೆ ಕೊಟ್ಟಿದೆ. ಹೈದಾರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 286 ರನ್ ಕಲೆಹಾಕಿದೆ.
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 286 ರನ್ ಕಲೆಹಾಕಿತು. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಸ್ಕೋರ್ ಆಗಿದೆ. ಕಳೆದ ವರ್ಷ ಇದೇ ತಂಡ ಆರ್ ಸಿಬಿ ವಿರುದ್ಧ 287 ರನ್ ಗಳಿಸಿದ್ದು ಮೊದಲ ಸ್ಥಾನದಲ್ಲಿದೆ.

ಅಭಿಷೇಕ್ ಶರ್ಮಾ 11 ಎಸೆತಗಳಲ್ಲಿ 24 ರನ್ ಗಳಿಸುವ ಮೂಲಕ ಸ್ಫೋಟಕ ಆರಂಭ ಕೊಟ್ಟರು. ಟ್ರಾವಿಸ್ ಹೆಡ್ 31 ಎಸೆತಗಳಲ್ಲಿ 9 ಬೌಂಡರಿ 3 ಸಿಕ್ಸರ್ ಮೂಲಕ 67 ರನ್ ಗಳಿಸುವ ಮೂಲಕ ಮಿಂಚಿದರು. ಮೊದಲ ಬಾರಿ ಸನ್‌ರೈಸರ್ಸ್ ಪರ ಆಡಿದ ಇಶಾನ್ ಕಿಶನ್ ಮೊದಲ ಪಂದ್ಯದಲ್ಲೇ ಅಬ್ಬರಿಸಿದರು.
47 ಎಸೆತಗಳಲ್ಲಿ 11 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ ಅಜೇಯ 106 ರನ್ ಗಳಿಸಿದರು. ನಿತೀಶ್ ಕುಮಾರ್ ರೆಡ್ಡಿ 15 ಎಸೆತಗಳಲ್ಲಿ 30 ರನ್ ಗಳಿಸಿದರೆ, ಹೆನ್ರಿಚ್ ಕ್ಲಾಸೆನ್ 14 ಎಸೆತಗಳಲ್ಲಿ 34 ರನ್ ಗಳಿಸಿದರು. ಒಂದು ಹಂತದಲ್ಲಿ 300 ರನ್ ಗಳಿಸುತ್ತದೆ ಎಂದೇ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು, ಆದರೆ ಕೊನೆಯ ಓವರ್ ಗಳಲ್ಲಿ ವಿಕೆಟ್ ಕಳೆದುಕೊಂಡ ಕಾರಣ 286 ರನ್ ಮಾತ್ರ ಗಳಿಸಿತು. ರಾಜಸ್ಥಾನ ರಾಯಲ್ಸ್‌ನ ವೇಗದ ಬೌಲರ್ ಜೋಫ್ರಾ ಆರ್ಚರ್ 4 ಓವರ್ ಗಳಲ್ಲಿ 76 ರನ್ ಬಿಟ್ಟುಕೊಡುವ ಮೂಲಕ ಕೆಟ್ಟ ದಾಖಲೆ ಬರೆದರು.
ಉಳಿದ ತಂಡಗಳಿಗೆ ಎಚ್ಚರಿಕೆ!
ಸನ್‌ರೈಸರ್ಸ್ ಹೈದರಾಬಾದ್ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಇಂತಹ ಬ್ಯಾಟಿಂಗ್ ಕಟ್ಟಿಹಾಕಲು ಬಲಿಷ್ಠ ಬೌಲಿಂಗ್ ಕೂಡ ಬೇಕಾಗುತ್ತದೆ. ಬೌಲಿಂಗ್ ಸ್ವಲ್ಪ ಯಾಮಾರಿದರೂ ಸನ್‌ರೈಸರ್ಸ್ ಹೈದರಾಬಾದ್ ಬೃಹತ್ ಮೊತ್ತ ಕಲೆಹಾಕುವುದು ಖಚಿತವಾಗುತ್ತದೆ. ಮೊದಲ ಪಂದ್ಯದಲ್ಲೇ ಉಳಿದ ತಂಡಗಳಿಗೆ ಎಸ್‌ಆರ್ ಎಚ್ ಎಚ್ಚರಿಕೆಯ ಸಂದೇಶವನ್ನಂತೂ ರವಾನಿಸಿದೆ. ಬೇರೆ ತಂಡಗಳು ಈ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಯಾವ ರೀತಿ ರಣತಂತ್ರ ರೂಪಿಸುತ್ತವೆ ನೋಡಬೇಕಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿ ಯಾವೆಲ್ಲಾ ದಾಖಲೆಗಳನ್ನೆಲ್ಲಾ ಮುರಿಯಲಿದೆ ಎಂದು ಕೂಡ ಅಭಿಮಾನಿಗಳು ಕಾಯುತ್ತಿದ್ದಾರೆ.












Click it and Unblock the Notifications