Shubman Gill: ಎರಡನೇ ಟೆಸ್ಟ್ ಗೆದ್ದರೆ ಶುಭಮನ್ ಗಿಲ್ ಇತಿಹಾಸ
ಭಾರತ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಭಾರತ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಆಂಡರ್ಸನ್-ತೆಂಡುಲ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದ್ದು, ಎರಡನೇ ಪಂದ್ಯದ ಮೇಲೆ ದೃಷ್ಟಿ ನೆಟ್ಟಿದೆ. ಈಗಾಗಲೇ ಟೀಮ್ ಇಂಡಿಯಾ ಬರ್ಮಿಂಗ್‌ಹ್ಯಾಮ್ ತಲುಪಿದ್ದು, ಅಭ್ಯಾಸ ಆರಂಭಿಸಿದೆ. ಟೀಮ್ ಇಂಡಿಯಾದ ನೂತನ ನಾಯಕ ಶುಭಮನ್ ಗಿಲ್‌ಗೆ ಇತಿಹಾಸ ನಿರ್ಮಿಸುವ ಸುವರ್ಣ ಅವಕಾಶ ಒಂದಿಂದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯ ಜುಲೈ 2ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಸ್ಟನ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದ್ದೇ ಆದಲ್ಲಿ ಇತಿಹಾಸ ನಿರ್ಮಿಸಬಹುದಾಗಿದೆ. ಈ ಮೈದಾನದಲ್ಲಿ ಈಗಾಗಲೇ 8 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿ ಆಗಿದ್ದು, ಏಳರಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಇನ್ನು ಒಂದು ಪಂದ್ಯ ಡ್ರಾ ಆಗಿದೆ. ಹೀಗಾಗಿ ಈ ಮೈದಾನದಲ್ಲಿ ಇನ್ನು ಟೀಮ್ ಇಂಡಿಯಾ ನಾಯಕರಾಗಿ ಯಾರು ಪಂದ್ಯವನ್ನು ಗೆದ್ದಿಲ್ಲ. ಈ ಸುವರ್ಣ ಅವಕಾಶ ಶುಭಮನ್ ಗಿಲ್ ಪಡೆಗೆ ಇದೆ.

ಟೀಮ್ ಇಂಡಿಯಾ 1967ರಲ್ಲಿ ಮೊದಲ ಬಾರಿಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಟೆಸ್ಟ್ ಪಂದ್ಯ ಆಡಿತು. ಅಂದಿನಿಂದ ಅನೇಕ ನಾಯಕರು ಭಾರತ ತಂಡವನ್ನು ಮುನ್ನಡೆಸಿದರು. ಆದರೆ ಈ ಮೈದಾನದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವೇ ಆಗಲಿಲ್ಲ. ಒಂದು ವೇಳೆ ಈ ಬಾರಿ ಯಂಗ್ ಟೀಮ್ ಇಂಡಿಯಾ ಈ ಸಾಧನೆಯನ್ನು ಮಾಡುವಲ್ಲಿ ಸಫಲರಾದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಬಹುದಾಗಿದೆ.
ಗೆದ್ದರೆ ಇತಿಹಾಸ
ಬರ್ಮಿಂಗ್‌ಹ್ಯಾಮ್ ಅಂಗಳದಲ್ಲಿ ಈಗಾಗಲೇ ಭಾರತವನ್ನು ಅಜಿತ್ ವಾಡೇಕರ್, ಎಸ್ ವೆಂಕಟರಾಘವನ್, ಮನ್ಸೂರ್ ಅಲಿ ಖಾನ್ ಪಟೌಡಿ, ಕಪಿಲ್ ದೇವ್, ಮೊಹಮ್ಮದ್ ಅಜರುದ್ದೀನ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಮುನ್ನಡೆಸಿದ್ದಾರೆ. ಈ ನಾಯಕರು ಮಾಡಲಾಗದ ಸಾಧನೆಯನ್ನು ಶುಭಮನ್ ಗಿಲ್ ಮಾಡಿದ್ದೇ ಆದಲ್ಲಿ ಇತಿಹಾಸ ನಿರ್ಮಾಣವಾಗುತ್ತದೆ.

ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಸರಣಿಯಲ್ಲಿ ಪುಟಿದೇಳುವ ಲೆಕ್ಕಾಚಾರ ಹಾಕಿಕೊಂಡಿದೆ. ಮೊದಲ ಪಂದ್ಯದಲ್ಲಿ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿದರೂ ಸಹ ಆಲ್‌ರೌಂಡರ್‌ಗಳು ಹಾಗೂ ಕೆಳ ಕ್ರಮಾಂಕದ ಆಟಗಾರರು ರನ್ ಕಲೆ ಹಾಕುವಲ್ಲಿ ಪರದಾಟ ನಡೆಸಿದರು. ಹೀಗಾಗಿ ಟೀಮ್ ಇಂಡಿಯಾ ಕೊನೆಯಲ್ಲಿ ಒತ್ತಡವನ್ನು ಅನುಭವಿಸಿತು. ಹೀಗಾಗಿ ಎರಡನೆ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಂಯೋಜನೆ ಹೇಗಿರಲಿದೆ ಎಂಬುದರ ಬಗ್ಗೆ ಪ್ರಶ್ನೆಗಳು ಎದ್ದಿವೆ. ಟೀಮ್ ಇಂಡಿಯಾ ಪರ ಆಡುವ ಅವಕಾಶವನ್ನು ಪಡೆದ ಶಾರ್ದೂಲ್ ಠಾಕೂರ್ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದರಿಂದ ಇವರ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಇವರ ಸ್ಥಾನದ ಮೇಲೆ ನಿತೀಶ್ ಕುಮಾರ್, ವಾಷಿಂಗ್ಟನ್ ಸುಳಂದರ್ ಕಣ್ಣು ನೆಟ್ಟಿದ್ದಾರೆ.












Click it and Unblock the Notifications