3 ಓವರ್, 2 ರನ್, 5 ವಿಕೆಟ್: ಕನ್ನಡತಿ ಶ್ರೇಯಾಂಕಾ ಪಾಟೀಲ್ ಆಟಕ್ಕೆ ತತ್ತರಿಸಿದ ಹಾಂಕಾಂಗ್
ಕನ್ನಡತಿ ಶ್ರೇಯಾಂಕ ಪಾಟೀಲ್ ಅಬ್ಬರದ ಬೌಲಿಂಗ್ ಆಟಕ್ಕೆ ಹಾಂಕಾಂಗ್ ಅಕ್ಷರಶಃ ನಲುಗಿಹೋಗಿದೆ. ಎಸಿಸಿ ಉದಯೋನ್ಮುಖ ಮಹಿಳೆಯರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಹಾಂಕಾಂಗ್ ಎ ತಂಡದ ವಿರುದ್ಧ ಭಾರತ ಎ ತಂಡ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.
ಮೊಂಗ್‌ಕಾಕ್‌ನ ಮಿಷನ್ ರೋಡ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಹಾಂಕಾಂಗ್ ಎ ತಂಡ ಕನ್ನಡತಿ ಶ್ರೇಯಾಂಕ ಪಾಟೀಲ್ ಬೌಲಿಂಗ್ ಮುಂದೆ ಮಕಾಡೆ ಮಲಗಿತು.

ಹಾಂಕಾಂಗ್ ಎ ತಂಡ 14 ಓವರ್ ಗಳಲ್ಲಿ 34 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಭಾರತಕ್ಕೆ ಸುಲಭ ಗುರಿ ನೀಡಿತು. ಈ ಗುರಿಯನ್ನು ಕೇವಲ 5.2 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಬೆನ್ನತ್ತಿದ ಭಾರತ ಎ ತಂಡ 9 ವಿಕೆಟ್‌ಗಳ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಹಾಂಕಾಂಗ್ ತಂಡಕ್ಕೆ ಭಾರತದ ಬೌಲರ್ ಗಳು ಎಡಬಿಡದೆ ಕಾಡಿದರು. ಹಾಂಕಾಂಗ್ 3 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಬಿದ್ದರೆ, 4 ರನ್ ಗಳಿಸಿದ್ದಾಗ ಎರಡನೇ ವಿಕೆಟ್, 5 ರನ್ ಗಳಿಸಿದ್ದಾಗ ಮೂರನೇ ವಿಕೆಟ್ ಪತನವಾಯಿತು. ನಂತರ ಹಾಂಕಾಂಗ್ ಆಘಾತದಿಂದ ಚೇತರಿಸಿಕೊಳ್ಳಲೇ ಇಲ್ಲ, 11ನೇ ಓವರ್ ನಲ್ಲಿ ಶ್ರೇಯಾಂಕ ಪಾಟೀಲ್ ಮೂರು ವಿಕೆಟ್ ಪಡೆದು ಮಿಂಚಿದರು.
ಅಂತಿಮವಾಗಿ 3 ಓವರ್ ಬೌಲಿಂಗ್ ಮಾಡಿದ ಶ್ರೇಯಾಂಕಾ ಪಾಟೀಲ್ 1 ಮೇಡನ್ ಸಹಿತ, 2 ರನ್ ನೀಡಿ 5 ವಿಕೆಟ್ ಪಡೆದರು. ಪಾರ್ಶವಿ ಚೋಪ್ರಾ 3 ಓವರ್ ಗಳಲ್ಲಿ 12 ರನ್ ನೀಡಿ 2 ವಿಕೆಟ್ ಪಡೆದರು, ಮನ್ನತ್ ಕಶ್ಯಪ್ 2 ಓವರ್ ಗಳಲ್ಲಿ 2 ರನ್ ನೀಡಿ 2 ವಿಕೆಟ್ ಪಡೆದರು. ತಿತಾಸ್ ಸಾಧು 2 ಓವರ್ ಗಳಲ್ಲಿ ಒಂದು ರನ್ ನೀಡಿ 1 ವಿಕೆಟ್ ಪಡೆದರು.

ಶ್ರೇಯಾಂಕ ಆಟಕ್ಕೆ ಭಾರಿ ಮೆಚ್ಚುಗೆ
ಶ್ರೇಯಾಂಕ ಪಾಟೀಲ್ ಆಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಭಾರತ ಮಹಿಳಾ ತಂಡದ ಭವಿಷ್ಯದ ಆಟಗಾರ್ತಿ ಎಂದು ಅನೇಕರು ಭವಿಷ್ಯ ನುಡಿದಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್ ಸಿಬಿ ತಂಡಕ್ಕಾಗಿ ಆಡಿದ್ದ ಬೆಂಗಳೂರಿನ ಶ್ರೇಯಾಂಕ ಪಾಟೀಲ್ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನದಿಂದ ಗಮನ ಸೆಳೆದಿದ್ದರು.












Click it and Unblock the Notifications