ರೋಹಿತ್ ಶರ್ಮಾ ಕೊಹ್ಲಿಗಿಂತ ಉತ್ತಮ ಆಟಗಾರ, ಆದರೆ...! ಶೋಯೆಬ್ ಅಖ್ತರ್ ಹೀಗಂದಿದ್ಯಾಕೆ?
2007 ರಿಂದ 2013ರ ನಡುವೆ ಐಸಿಸಿ ಟ್ರೋಫಿ ಗೆಲ್ಲುವ ವಿಚಾರದಲ್ಲಿ ಭಾರತ ತಂಡಕ್ಕೆ ಸುವರ್ಣಯುಗವಾಗಿತ್ತು. ಈ ಏಳು ವರ್ಷಗಳಲ್ಲಿ ಭಾರತ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ಬೀಗಿತ್ತು. ಅದಾದ ಬಳಿಕ ಭಾರತ ಕಳೆದ 10 ವರ್ಷಗಳಿಂದ ಒಮ್ಮೆಯೂ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಬಾರಿ ಭಾರತದಲ್ಲೇ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿರುವ ಕಾರಣ ಭಾರತ ತಂಡ ಗೆಲ್ಲುವ ಫೇವರಿಟ್ ಅನಿಸಿಕೊಂಡಿದೆ.
2007 ರಿಂದ 2013ರಲ್ಲಿ ಭಾರತ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ಎಂಎಸ್ ಧೋನಿ ತಂಡದ ನಾಯಕರಾಗಿದ್ದರು. ಈ ಬಾರಿ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಿಕೊಂಡಿದ್ದು, ವಿಶ್ವಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಐಸಿಸಿ ಕಪ್ ಗೆಲ್ಲುವಲ್ಲಿ ತಂಡದ ನಾಯಕತ್ವ ಮುಖ್ಯಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ. 2007-13ರವರೆಗೆ ಭಾರತ ಮೂರು ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಧೋನಿ ಪ್ರಮುಖ ಪಾತ್ರ ವಹಿಸಿದ್ದರು, ಅವರು ಶಾಂತವಾಗಿರುತ್ತಿದ್ದು, ಯೋಜನೆಗಳು ಉತ್ತಮವಾಗಿರುತ್ತಿದ್ದವು ಎಂದು ಹೇಳಿದ್ದಾರೆ.
ಬ್ಯಾಕ್‌ಸ್ಟೇಜ್ ವಿತ್ ಬೋರಿಯಾದಲ್ಲಿ ನೀಡಿದ ಸಂದರ್ಶನದಲ್ಲಿ, ಎಂಎಸ್ ಧೋನಿ ಅವರಂತಹ ನಾಯಕನ ಕೊರತೆಯಿಂದ ಕಳೆದ 10 ವರ್ಷಗಳಲ್ಲಿ ಭಾರತ ತಂಡ ಐಸಿಸಿ ಟ್ರೋಫಿಯನ್ನು ಎತ್ತುವಲ್ಲಿ ವಿಫಲವಾಗಿದೆ ಎಂದು ಅಖ್ತರ್ ವಿವರಿಸಿದ್ದಾರೆ. ಪ್ರಸ್ತುತ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ ಶ್ರೇಷ್ಠ ಆಟಗಾರನಾಗಿದ್ದೂ, ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ ಅವರು, ತಂಡದ ನಾಯಕ ಎಂದಿಗೂ ಒತ್ತಡಕ್ಕೆ ಒಳಗಾಗಬಾರದು ಎಂದರು.
ಧೋನಿಯನ್ನು ಹೊಗಳಿದ ಅಖ್ತರ್
"ಒಂದು ಕಾಲದಲ್ಲಿ ಇಡೀ ತಂಡದ ಒತ್ತಡವನ್ನು ತನ್ನ ಮೇಲೆ ತೆಗೆದುಕೊಳ್ಳುವ ಒಬ್ಬ ವ್ಯಕ್ತಿ ಇದ್ದನು - ಅದು ಧೋನಿ" ಎಂದು ಅಖ್ತರ್ ಹೇಳಿದರು. "ಒಬ್ಬ ನಾಯಕ ಮಾತ್ರ ತನ್ನ ಹಿಂದೆ ಇಡೀ ತಂಡವನ್ನು ರಕ್ಷಿಸಬಹುದು. ರೋಹಿತ್ ಒಬ್ಬ ಮಹಾನ್ ಆಟಗಾರ, ಆದರೆ ನಾಯಕತ್ವದ ಸಮಯದಲ್ಲಿ ಅವರು ದುರ್ಬಲನಾಗುತ್ತಾರೆ, ಗಾಬರಿಯಾಗುತ್ತಾನೆ. ಇದು ಕಟುವಾದ ಮಾತುಗಳಾಗಿರಬಹುದು, ಆದರೆ ಅವರು ನಾಯಕತ್ವದ ಜವಾಬ್ದಾರಿ ತೆಗೆದುಕೊಳ್ಳಬೇಕಿಲ್ಲ ಎಂದು ನಾನು ಭಾವಿಸುತ್ತೇನೆ." ಎಂದು ಹೇಳಿದರು.
ರೋಹಿತ್ ಕೊಹ್ಲಿಗಿಂತ ಉತ್ತಮ ಬ್ಯಾಟ್ಸ್‌ಮನ್ ಆಗಿದ್ದರೂ, ಪಂದ್ಯದಲ್ಲಿ ನಿರ್ಣಾಯಕ ಹಂತಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಅವರಿಗೆ ಅನುಮಾನವಿದೆ ಮತ್ತು ಅವರು ತಮ್ಮ ನಾಯಕತ್ವದ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕೊಹ್ಲಿ ಕೂಡ ರೋಹಿತ್ ಅಷ್ಟು ಪ್ರತಿಭಾವಂತರಲ್ಲ
ವಿರಾಟ್ ಕೊಹ್ಲಿ ಕೂಡ ರೋಹಿತ್ ಶರ್ಮಾ ಅವರಷ್ಟು ಪ್ರತಿಭಾವಂತ ಬ್ಯಾಟರ್ ಅಲ್ಲ. ರೋಹಿತ್ ಒಬ್ಬ ಕ್ಲಾಸಿಕಲ್ ಬ್ಯಾಟರ್, ಆದರೆ ನಾಯಕತ್ವದ ಹೊರೆ ಅವರನ್ನು ಕಟ್ಟಿಹಾಕಿದೆ ಎನಿಸುತ್ತದೆ ಎಂದು ಅಖ್ತರ್ ಹೇಳಿದರು.
ಕೊಹ್ಲಿ ನಾಯಕತ್ವದಲ್ಲಿ ಭಾರತವು 2019 ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿತ್ತು. 2021 ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. 2017 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೋತಿತು. 2022ರಲ್ಲಿ ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವ ವಹಿಸಿಕೊಂಡರು, ಅವರ ನಾಯಕತ್ವದಲ್ಲಿ ಭಾರತ 27 ಪಂದ್ಯಗಳಲ್ಲಿ 20 ಪಂದ್ಯ ಗೆದ್ದಿದ್ದು, 74.07 ಗೆಲುವಿನ ಸರಾಸರಿ ಹೊಂದಿದ್ದಾರೆ. ಆದರೂ 2022ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿತ್ತು.
ಇದು ಉತ್ತಮ ಅವಕಾಶ
2023ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯುವುದರಿಂದ ರೋಹಿತ್ ಶರ್ಮಾ ಅವರಿಗೆ ತಮ್ಮ ಉತ್ತಮ ಅವಕಾಶ ಸಿಕ್ಕಂತಾಘಿದೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
"ರೋಹಿತ್ ಈ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ" ಎಂದು ಅಖ್ತರ್ ಹೇಳಿದರು, ಭಾರತ ತಂಡಕ್ಕೆ ತವರಿನ ಪ್ರೇಕ್ಷಕರ ಬೆಂಬಲ ಇದೆ. ಈ ಬಾರಿ ವಿಶ್ವಕಪ್ ಗೆದ್ದು ನಾನು ಹೇಳಿದ್ದು ಎಂದು ಸಾಬೀತುಪಡಿಸಿ, ಅವರಿಗೆ ಆ ಸಾಮರ್ಥ್ಯವಿದೆ ಎಂದು ಹೇಳಿದರು.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕೂಡ ಭಾರತ ತಂಡ ದುರ್ಬಲವಾಗಿತ್ತು ಎಂದು ಅಖ್ತರ್ ಹೇಳಿದ್ದಾರೆ. ಆದರೆ ಕೊಹ್ಲಿ ಅತಿಯಾದ ಆಕ್ರಮಣಕಾರಿ ವರ್ತನೆ ಹೊಂದಿದ್ದರು. ರೋಹಿತ್ ಶರ್ಮಾ ಬೇಗನೆ ಗಾಬರಿಯಾಗುತ್ತಾರೆ ಎಂದು ಹೇಳಿದ್ದಾರೆ.












Click it and Unblock the Notifications