RCB: ಆರ್‌ಸಿಬಿಗೆ ವಾರ್ನಿಂಗ್ ಕೊಟ್ಟ ಶಿವಣ್ಣ; ಬೇಡಿಕೆ ಏನು ಗೊತ್ತಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಅಧ್ಯಾಯ ಆರಂಭವಾಗಿದೆ. ಸ್ವತಃ ವಿರಾಟ್ ಕೊಹ್ಲಿ ಕನ್ನಡದಲ್ಲಿ ಹೊಸ ಅಧ್ಯಾಯ ಆರಂಭ ಎಂದು ಹೇಳಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಮೃತಿ ಮಂಧಾನ ಪಡೆ ಕಪ್ ಗೆಲ್ಲುವ ಮೂಲಕ ಆರ್‌ಸಿಬಿ ಟ್ರೋಫಿಯ ಖಾತೆ ತೆರೆದಿದೆ. ಪುರುಷರ ತಂಡಕ್ಕೂ ಇದು ಹೊಸ ಉತ್ಸಾಹ ನೀಡಿದ್ದು, ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ.
ಮುಖ್ಯವಾಗಿ ಬೆಂಗಲೋರ್ ಎಂದು ಇದ್ದ ಹೆಸರನ್ನು ಬೆಂಗಳೂರು ಎಂದು ಬದಲಾವಣೆ ಮಾಡಿದೆ. ಟೀಸರ್ ಮೂಲಕ ಹೆಸರು ಬದಲಾವಣೆ ಮಾಡುವ ಸೂಚನೆಯನ್ನು ಆರ್ ಸಿಬಿ ನೀಡಿತ್ತು. ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್, ಡ್ಯಾನಿಶ್ ಸೇಟ್, ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಮತ್ತು ರಶ್ಮಿಕಾ ಮಂದಣ್ಣ ಈ ಟೀಸರ್ ಗಳಲ್ಲಿ ಕಾಣಿಸಿಕೊಂಡಿದ್ದರು.

ಮಾರ್ಚ್ 19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಬೆಂಗಳೂರು ಹೆಸರು ಬದಲಾವಣೆ ಮಾಡಲಾಗಿದೆ. ಟೀಸರ್ ನಲ್ಲಿ ಕಾಣಿಸಿಕೊಂಡ ಎಲ್ಲರಿಗೂ ಆರ್ ಸಿಬಿ ಎಕ್ಸ್ ಖಾತೆಯಲ್ಲಿ ಧನ್ಯವಾದ ತಿಳಿಸಿದೆ. ಇದಕ್ಕುತ್ತರವಾಗಿ ಶಿವಣ್ಣ ತಂಡಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಕಪ್ ಗೆಲ್ಲಲೇಬೇಕು ಎಂದು ಶಿವಣ್ಣ
"ಇವಾಗ ಎಲ್ಲರಿಗೂ ಅರ್ಥ ಆಯ್ತು, ವಿಶೇಷವಾದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಕ್ಕೆ ಧನ್ಯವಾದ, ನಿಮ್ಮ ಚಿತ್ರಗಳು ಎಲ್ಲಾ ರೆಕಾರ್ಡ್ ಬ್ರೇಕ್ ಮಾಡ್ಲಿ ಅಂತ ಹಾರೈಸ್ತೀವಿ." ಎಂದು ಆರ್ ಸಿಬಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಡಾ. ಶಿವರಾಜ್‌ಕುಮಾರ್ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, "ಧನ್ಯವಾದ, ಈ ವಿಡಿಯೋ ಭಾಗವಾಗಿದ್ದಕ್ಕೆ ನನಗೆ ಖುಷಿಯಾಗಿದೆ. "ಈ ಸಲ ಕಪ್ ಗೆಲ್ಬೇಕು, ಅರ್ಥ ಆಯ್ತಾ" ಎಂದು ಆರ್‌ಸಿಬಿ ತಂಡಕ್ಕೆ ಎಚ್ಚರಿಕೆ ರೀತಿಯಲ್ಲಿ ಮನವಿ ಸಲ್ಲಿಸಿದ್ದಾರೆ.
ಬಲಿಷ್ಠ ತಂಡ, ಪ್ರಶಸ್ತಿ ಬರ ನೀಗುತ್ತಾ?
ಈ ಬಾರಿ ಆರ್ ಸಿಬಿ ತಂಡ ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣುತ್ತಿದೆ. ಮ್ಯಾಕ್ಸ್‌ವೆಲ್, ಕೊಹ್ಲಿ, ಡುಪ್ಲೆಸಿಸ್, ವಿಲ್ ಜ್ಯಾಕ್ಸ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ ಅವರಂತಹ ಸ್ಫೋಟಕ ಆಟಗಾರರು ತಂಡದಲ್ಲಿದ್ದಾರೆ. ಲಾಕಿ ಫರ್ಗ್ಯುಸನ್, ರೀಸ್ ಟೋಪ್ಲೆ, ಅಲ್ಜಾರಿ ಜೋಸೆಫ್, ವೈಶಾಖ್ ವಿಜಯ್ ಕುಮಾರ್ ಸೇರಿದಂತೆ ವೇಗದ ಬೌಲಿಂಗ್ ಪಡೆ ಇದೆ. ಆದರೆ ಅನುಭವಿ ಸ್ಪಿನ್ನರ್ ಕೊರತೆ ಇದ್ದು, ಹಿಮಾಂಶು ಶರ್ಮಾ ಮೇಲೆ ಹೆಚ್ಚಿನ ಭರವಸೆ ಇಡಲಾಗಿದೆ. ತಂಡವಾಗಿ ಉತ್ತಮ ಪ್ರದರ್ಶನ ನೀಡಿದರೆ, ಈ ಬಾರಿ ಆರ್ ಸಿಬಿ ಸುಲಭವಾಗಿ ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದು.












Click it and Unblock the Notifications