Aus vs WI: ಗಬ್ಬಾದಲ್ಲಿ ಆಸ್ಟ್ರೇಲಿಯಾ ಗರ್ವಭಂಗ: ವೆಸ್ಟ್ ಇಂಡೀಸ್‌ಗೆ 8 ರನ್‌ಗಳ ರೋಚಕ ಗೆಲುವು
ಆಸ್ಟ್ರೇಲಿಯಾದ ಬ್ರಿಸ್ಬೇನ್ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ರಣ ರೋಚಕ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 8 ರನ್‌ಗಳ ಗೆಲುವು ಸಾಧಿಸಿದೆ. 21 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವನ್ನು ಗೆದ್ದಿದೆ.
30 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆದ್ದಿದೆ. ಗಬ್ಬಾದಲ್ಲಿ ವೆಸ್ಟ್ ಇಂಡೀಸ್ ಕೊನೆಯ ಬಾರಿಗೆ 1988ರಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು. 36 ವರ್ಷಗಳ ಬಳಿಕ ಗಬ್ಬಾದಲ್ಲಿ ಮತ್ತೆ ಟೆಸ್ಟ್ ಗೆದ್ದ ಸಾಧನೆ ಮಾಡಿದೆ.

ವಿಶ್ವ ಟೆಸ್ಟ್ ಚಾಂಪಿಯನ್ ತಂಡವನ್ನು ಮಣಿಸುವುದು ವೆಸ್ಟ್ ಇಂಡೀಸ್‌ಗೆ ಸುಲಭವಾಗಿರಲಿಲ್ಲ. ಆದರೆ ಶಮರ್ ಜೋಸೆಫ್ ಅವರ ಮಾರಕ ಬೌಲಿಂಗ್ ಕೆರಿಬಿಯನ್ ಪಡೆಗೆ ರೋಚಕ ಗೆಲುವು ತಂದುಕೊಟ್ಟಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಶಮರ್ ಜೋಸೆಫ್ 7 ವಿಕೆಟ್ ಪಡೆದು, ಆಸ್ಟ್ರೇಲಿಯಾ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು.
ನಾಲ್ಕನೇ ದಿನ ಮುಗಿದ ಪಂದ್ಯ
ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿದ್ದ ಆಸ್ಟ್ರೇಲಿಯಾ ಸರಣಿ ಗೆಲುವಿನ ವಿಶ್ವಾಸದಲ್ಲೇ ಎರಡನೇ ಪಂದ್ಯಕ್ಕೆ ಸಜ್ಜಾಗಿತ್ತು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ 311 ರನ್‌ಗಳಿಗೆ ಆಲೌಟ್ ಆಗಿತ್ತು. ಕವೆಮ್ ಹಾಡ್ಜ್ 71, ಜೋಶುವಾ ಡಿಸಿಲ್ವ 79, ಕೆವಿನ್ ಸಿಂಚ್ಲೆರ್ 50 ರನ್ ಗಳಿಸಿ ವೆಸ್ಟ್ ಇಂಡೀಸ್ ತಂಡಕ್ಕೆ ಆಸರೆಯಾಗಿದ್ದರು. ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದುಕೊಂಡಿದ್ದರು.
ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿತ್ತು. ಖವಾಜ 73, ಅಲೆಕ್ಸ್ ಕ್ಯಾರಿ 65 ಮತ್ತು ನಾಯಕ ಪಾಟ್ ಕಮ್ಮಿನ್ಸ್ 64 ರನ್ ಗಳಿಸಿದ್ದರು. ಅಲ್ಜಾರಿ ಜೋಸೆಫ್ 4 ವಿಕೆಟ್ ಗಳಿಸಿದ್ದರು.
22 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ 193 ರನ್‌ಗಳಿಗೆ ಆಲೌಟ್ ಆಗಿತ್ತು. ಹೇಜಲ್‌ವುಡ್ ಮತ್ತು ನಥನ್ ಲಿಯೋನ್ ತಲಾ 3 ವಿಕೆಟ್ ಗಳಿಸಿದ್ದರು. 216 ರನ್‌ಗಳ ಗೆಲುವಿನ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 207 ರನ್‌ಗಳಿಗೆ ಆಲೌಟ್ ಆಗುವ ಮೂಲಕ 8 ರನ್‌ಗಳಿಂದ ಸೋಲನುಭವಿಸಿತು.
ಸ್ಟೀವ್ ಸ್ಮಿತ್ ಅಜೇಯ 91 ರನ್ ಗಳಿಸುವ ಮೂಲಕ ಏಕಾಂಗಿ ಹೋರಾಟ ನೀಡಿದರು ತಂಡವನ್ನು ಗೆಲುವಿನ ದಡ ಸೇರಿಸಲು ಮತ್ತೊಂದು ಕಡೆಯಿಂದ ಅವರಿಗೆ ಬೆಂಬಲ ಸಿಗಲಿಲ್ಲ. ಶಮರ್ ಜೋಸೆಫ್ 7 ವಿಕೆಟ್ ಪಡೆದರೆ, ಅಲ್ಜಾರಿ ಜೋಸೆಫ್ 2 ವಿಕೆಟ್ ಪಡೆದರು.












Click it and Unblock the Notifications