Shreyas Iyer: ತಂಡಕ್ಕಾಗಿ ಶತಕ ತ್ಯಾಗ ಮಾಡಿದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ನಡೆದುಕೊಂಡ ರೀತಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಾಯಕನಾಗಿ ತಂಡದ ಗೆಲುವು ಮುಖ್ಯ, ವೈಯಕ್ತಿಕ ಸಾಧನೆಯಲ್ಲ ಎನ್ನುವಂತೆ ಶತಕವನ್ನೇ ತ್ಯಾಗ ಮಾಡಿದ ಅವರ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 42 ಎಸೆತಗಳಲ್ಲಿ 5 ಬೌಂಡರಿ 9 ಸಿಕ್ಸರ್ ಸಹಿತ ಅಜೇಯ 97 ರನ್ ಗಳಿಸಿದರು. ಶತಕದ ಸನಿಹದಲ್ಲಿದ್ದರೂ ಕೊನೆಯ ಓವರ್ ನಲ್ಲಿ ಅವರು ಸ್ಟ್ರೈಕ್‌ಗೆ ಬರಲೇ ಇಲ್ಲ, ಶಶಾಂಕ್ ಸಿಂಗ್ ಅವರಿಗೆ ಬೌಂಡರಿಗಳನ್ನು ಬಾರಿಸುವಂತೆ ಸಲಹೆ ಕೊಟ್ಟರು.

ತನಗೆ ಶತಕ ಸಿಡಿಸುವುದಕ್ಕಿಂತ ತಂಡವು ದೊಡ್ಡ ಮೊತ್ತ ಗಳಿಸುವುದು ಮುಖ್ಯ ಎಂದರು. ಶಶಾಂಕ್ ಸಿಂಗ್ ಅವರಿಗೆ ಬೌಂಡರಿ ಬಾರಿಸುವತ್ತ ಗಮನ ಕೊಡುವಂತೆ ಹೇಳಿದರು. ಅದಕ್ಕೆ ತಕ್ಕಂತೆ ಶಶಾಂಕ್ ಸಿಂಗ್ ಕೊನೆಯ ಓವರ್ ನಲ್ಲಿ 21 ರನ್ ಸಿಡಿಸುವ ಮೂಲಕ ಪಂಜಾಬ್ ದೊಡ್ಡ ಮೊತ್ತ ಕಲೆಹಾಕಲು ಕಾರಣವಾದರು.
ಶ್ರೇಯಸ್ ನಡೆಗೆ ವ್ಯಾಪಕ ಮೆಚ್ಚುಗೆ
ಶ್ರೇಯಸ್ ಅಯ್ಯರ್ ಅವರ ನಡೆಗೆ ಕ್ರಿಕೆಟ್ ಅಭಿಮಾನಿಗಳು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಕನಾಗಿ ಶ್ರೇಯಸ್ ಅಯ್ಯರ್ ಮಾಡಿದ್ದು ಸರಿ, ಬೇರೆ ತಂಡದ ನಾಯಕರಿಗೆ ಇದು ಮಾದರಿಯಾಗಬೇಕು ಎಂದು ಹೇಳಿದ್ದಾರೆ. ಶತಕ ಗಳಿಸುವ ದೊಡ್ಡ ಅವಕಾಶ ಇದ್ದರೂ, ಸಹ ಆಟಗಾರನಿಗೆ ಒಂದು ರನ್‌ಗಾಗಿ ಕೇಳದೆ ಬೌಂಡರಿ ಬಾರಿಸು ಎನ್ನುವುದು ನಿಜಕ್ಕೂ ಗ್ರೇಟ್ ಎಂದಿದ್ದಾರೆ.
ಶತಕ ಸಿಡಿಸದೇ ಇದ್ದರೂ ಶ್ರೇಯಸ್ ಮುಖದಲ್ಲಿ ಯಾವುದೇ ವಿಷಾದವೂ ಇರಲಿಲ್ಲ, ಕೊನೆಯ ಓವರ್ ನಲ್ಲಿ 21 ರನ್ ಬಾರಿಸಿದ ಶಶಾಂಕ್ ಸಿಂಗ್ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 2024ರ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ನಾಯಕರಾಗಿದ್ದ ಅವರು, ತಂಡವನ್ನು ಚಾಂಪಿಯನ್ ಆಗಿದ್ದರು. ಆದರೂ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಕೆಕೆಆರ್ ಅವರನ್ನು ಬಿಡುಗಡೆ ಮಾಡಿತು. ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಅವರನ್ನು ಖರೀದಿ ಮಾಡಿತು. ಬಳಿಕ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಿತ್ತು.












Click it and Unblock the Notifications