Sachin Tendulkar: ಅಭಿಮಾನಿಗಳ ಮನಗೆದ್ದ ಸಚಿನ್ ತೆಂಡೂಲ್ಕರ್ ಮನಮೋಹಕ ಬ್ಯಾಟಿಂಗ್
ಸಚಿನ್ ತೆಂಡೂಲ್ಕರ್ 'ಕ್ರಿಕೆಟ್ ದೇವರು' ಅಥವಾ ಗಾಡ್ ಆಫ್ ಕ್ರಿಕೆಟ್ ಎಂದೇ ಕರೆಸಿಕೊಳ್ಳುತ್ತಾರೆ. ಅವರ ಕೆಲವು ದಾಖಲೆಗಳನ್ನು ಮುರಿಯುವ ಬ್ಯಾಟರ್ ಬರುವುದೇ ಅನುಮಾನ ಎನ್ನುಷ್ಟು ಸಾಧನೆ ಮಾಡಿದ್ದಾರೆ. 2012ರಲ್ಲಿ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿ ಪಡೆದು 13 ವರ್ಷಗಳಾದರೂ ಅವರ ಹಲವು ದಾಖಲೆಗಳ ಹತ್ತಿರ ಕೂಡ ಇನ್ನೂ ಯಾರಿಗೂ ಬರಲು ಆಗುತ್ತಿಲ್ಲ. ಅಂತಹ ಕ್ರಿಕೆಟ್ ದೇವರು ಮತ್ತೊಮ್ಮೆ ಮೈದಾನಕ್ಕಿಳಿದರೆ ಅಭಿಮಾನಿಗಳಿಗೆ ಅದಕ್ಕಿಂತ ಖುಷಿ ಇನ್ನೇನಿದೆ.
51 ವರ್ಷದ ಸಚಿನ್ ತೆಂಡೂಲ್ಕರ್ ಮತ್ತೊಮ್ಮೆ ಭಾರತ ತಂಡದ ಪರವಾಗಿ ಆಡುತ್ತಿದ್ದಾರೆ. ತಾನು ಕ್ರಿಕೆಟ್‌ನಿಂದ ದೂರವಾಗಿ 13 ವರ್ಷವಾದರೂ ಕ್ರಿಕೆಟ್ ನನ್ನಿಂದ ದೂರವಾಗಿಲ್ಲ ಎನ್ನುವನ್ನು ಸಾಬೀತು ಮಾಡಿದ್ದಾರೆ. ಬುಧವಾರ ವಡೋದರಾದಲ್ಲಿ ಅವರಾಡಿದ ಇನ್ನಿಂಗ್ಸ್ ಸಚಿನ್‌ರ ಗತವೈಭವವನ್ನು ನೆನಪಿಸಿತು. ಸಚಿನ್‌ಗೆ ವಯಸ್ಸೇ ಆಗಲ್ವಾ ಎನ್ನುಂತೆ ಮಾಡಿತು.

ಇಂಟನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 ಪಂದ್ಯಾವಳಿ ನಡೆಯುತ್ತಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಹಿರಿಯ ಆಟಗಾರರು ಆಡುತ್ತಿದ್ದಾರೆ. ಇಂಡಿಯಾ ಮಾಸ್ಟರ್ಸ್ ತಂಡಕ್ಕೆ ಸಚಿನ್ ತೆಂಡೂಲ್ಕರ್ ನಾಯಕತ್ವ ವಹಿಸಿಕೊಂಡಿದ್ದು ಈಗಾಗಲೇ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದೆ. ಬುಧವಾರ ಆಸ್ಟ್ರೇಲಿಯಾ ಮಾಸ್ಟರ್ಸ್ ವಿರುದ್ಧ ಭಾರತ ಸೋತರೂ ಸಚಿನ್ ತೆಂಡೂಲ್ಕರ್ ಆಡಿದ ಇನ್ನಿಂಗ್ಸ್ ಮಾತ್ರ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ ಎನ್ನುವಂತಾಗಿತ್ತು.
ಭರ್ಜರಿ ಅರ್ಧಶತಕ ಸಿಡಿಸಿದ ಸಚಿನ್
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಾಸ್ಟರ್ಸ್ 20 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 269 ರನ್ ಕಲೆ ಹಾಕಿತು. ಶೇನ್ ವ್ಯಾಟ್ಸನ್ 52 ಎಸೆತಗಳಲ್ಲಿ ಅಜೇಯ 110 ರನ್ ಗಳಿಸಿದರೆ, ಬೆನ್ ಡಂಕ್ 53 ಎಸೆತಗಳಲ್ಲಿ 132 ರನ್ ಗಳಿಸಿದರು. 270 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಮಾಸ್ಟರ್ಸ್ ಪರವಾಗಿ ಸಚಿನ್ ತೆಂಡೂಲ್ಕರ್ ಏಕಾಂಗಿ ಹೋರಾಟ ಮಾಡಿದರು.
33 ಎಸೆತಗಳಲ್ಲಿ 7 ಬೌಂಡರಿ 4 ಅಮೋಘ ಸಿಕ್ಸರ್ ಸಹಿತ 64 ರನ್ ಗಳಿಸುವ ಮೂಲಕ ಮಿಂಚಿದರು. ಮೈದಾನದಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಮ್ಮೆ ಸಚಿನ್ ತೆಂಡೂಲ್ಕರ್ ಅವರ ಮನಮೋಹಕ ಇನ್ನಿಂಗ್ಸ್ ನೋಡುವ ಸೌಭಾಗ್ಯ ಸಿಕ್ಕಿತು. 51ರ ವಯಸ್ಸಿನಲ್ಲೂ ಬೌಂಡರಿ ಸಿಕ್ಸರ್ ಬಾರಿಸಿ ಈ ಕಾಲಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದ್ದು ಅವರ ಅಭಿಮಾನಿಗಳಿಗಂತೂ ಹಬ್ಬವೇ ಸರಿ.












Click it and Unblock the Notifications