Ind vs Ban: ಅಕ್ಷರ್ ಪಟೇಲ್ ಬಳಿ ಕ್ಷಮೆ ಕೇಳಿದ ರೋಹಿತ್; ಗಂಭೀರ್ ವಿರುದ್ಧ ಭಾರಿ ಆಕ್ರೋಶ!
ಭಾರತದ ವಿರುದ್ಧದ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯದಲ್ಲಿ ಬಾಂಗ್ಲಾದೇಶ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿದೆ. ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಬಾಂಗ್ಲಾದೇಶಕ್ಕೆ ಜಾಕರ್ ಅಲಿ ಮತ್ತು ಟೋವಿಡ್ ಹೃದೋಯ್ ಆಸರೆಯಾದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ 35 ರನ್ ಆಗುವಷ್ಟರಲ್ಲೇ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 9ನೇ ಓವರ್ ನಲ್ಲಿ ಅಕ್ಷರ್ ಪಟೇಲ್ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದು ಬಾಂಗ್ಲಾದೇಶಕ್ಕೆ ಶಾಕ್ ಕೊಟ್ಟಿದ್ದರು. ಮೂರನೇ ಎಸೆತದಲ್ಲಿ ಅವರು ವಿಕೆಟ್ ಪಡೆಯುವ ಅವಕಾಶ ಸೃಷ್ಟಿಸಿದ್ದರು. ನಾಯಕ ರೋಹಿತ್ ಶರ್ಮಾ ಸ್ಲಿಪ್‌ನಲ್ಲಿ ಸುಲಭವಾದ ಕ್ಯಾಚ್ ಕೈಚೆಲ್ಲಿದರು.

ಕ್ಯಾಚ್ ಕೈಬಿಡುತ್ತಿದ್ದಂತೆ ರೋಹಿತ್ ಶರ್ಮಾ ತುಂಬಾ ಬೇಸರಗೊಂಡರು. ಸಿಟ್ಟಿನಲ್ಲಿ ಮೈದಾನಕ್ಕೆ ಜೋರಾಗಿ ಗುದ್ದಿದರು. ಬಳಿಕ ಅಕ್ಷರ್ ಪಟೇಲ್ ಕಡೆ ನೋಡಿದ ಅವರು ಕೈಮುಗಿದು ಕ್ಷಮೆ ಕೇಳಿದರು. ರೋಹಿತ್ ಆ ಕ್ಯಾಚ್ ಹಿಡಿದಿದ್ದರೆ ಅಕ್ಷರ್ ಪಟೇಲ್ ಹ್ಯಾಟ್ರಿಕ್ ಪಡೆದು ದಾಖಲೆ ಮಾಡುವ ಜೊತೆಗೆ ಬಾಂಗ್ಲಾದೇಶವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಅವಕಾಶವಿತ್ತು.
9ನೇ ಓವರ್ ನಲ್ಲಿ ಜೀವದಾನ ಪಡೆದ ಜೇಕರ್ ಅಲಿ ಬಳಿಕ ಎಚ್ಚರಿಕೆಯಿಂದ ಆಡಿದರು. ಟೋವಿಡ್ ಹೃದೋಯ್ ಜೊತೆಗೆ 6ನೇ ವಿಕೆಟ್‌ಗೆ 154 ರನ್‌ಗಳ ಜೊತೆಯಾಟ ಆಡುವ ಮೂಲಕ ಭಾರತವನ್ನು ಇನ್ನಿಲ್ಲದಂತೆ ಕಾಡಿದರು. ಜೇಕರ್ ಅಲಿ 114 ಎಸೆತಗಳಲ್ಲಿ ತಾಳ್ಮೆಯ 68 ರನ್ ಗಳಿಸಿದರು.
ಗೌತಮ್ ಗಂಭೀರ್ ವಿರುದ್ಧ ಆಕ್ರೋಶ
ಭಾರತ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅರ್ಷದೀಪ್ ಸಿಂಗ್ ಬದಲಾಗಿ ಹರ್ಷಿತ್ ರಾಣಾರನ್ನು ಆಯ್ಕೆ ಮಾಡಿದ್ದು ಭಾರತದ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಐಸಿಸಿ ಪಂದ್ಯಾವಳಿಯಲ್ಲಿ ಅರ್ಷದೀಪ್ ಸಿಂಗ್ ಆಡಿರುವ ಅನುಭವ ಹೊಂದಿದ್ದಾರೆ, ಅವರನ್ನು ಕೈಬಿಟ್ಟು ಹರ್ಷಿತ್ ರಾಣಾಗೆ ಅವಕಾಶ ಕೊಟ್ಟಿದ್ದೇಕೆ ಎನ್ನುವ ಪ್ರಶ್ನೆ ಎದುರಾಗಿದೆ.
ಅರ್ಷದೀಪ್ ಸಿಂಗ್ ಎಡಗೈ ವೇಗಿಯಾಗಿದ್ದು ಆರಂಭಿಕ ಓವರ್ ಗಳಲ್ಲಿ ವಿಕೆಟ್ ತೆಗೆಯುವ ಕ್ಷಮತೆ ಹೊಂದಿದ್ದಾರೆ. ಗೌತಮ್ ಗಂಭೀರ್ ಅರ್ಷದೀಪ್ ಸಿಂಗ್‌ರನ್ನು ಬೇಕೆಂದೆ ಕಡೆಗಣಿಸಿ ಹರ್ಷಿತ್ ರಾಣಾಗೆ ಮಣೆಹಾಕಿದ್ದಾರೆ. ಕೆಕೆಆರ್ ತಂಡದ ಮೆಂಟರ್ ಆಗಿದ್ದಾಗ ಹರ್ಷಿತ್ ರಾಣಾರ ಸಾಮರ್ಥ್ಯವನ್ನು ನೋಡಿದ್ದ ಗಂಭೀರ್, ಅವರಿಗೆ ಮಣೆ ಹಾಕಿದ್ದಾರೆ ಎಂದು ಕೆಲವು ಅಭಿಮಾನಿಗಳು ವಾದಿಸಿದ್ದಾರೆ.
ಹರ್ಷಿತ್ ರಾಣಾ ಸಿಕ್ಕ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಂಡರು. ಶಮಿ ಜೊತೆ ಉತ್ತಮವಾಗಿ ಬೌಲಿಂಗ್ ಮಾಡಿದ ಅವರು, 3 ವಿಕೆಟ್ ಪಡೆಯುವ ಮೂಲಕ ಮಿಂಚಿದರು.












Click it and Unblock the Notifications