Rohit Sharma: ರಣಜಿ ಟ್ರೋಫಿಯಲ್ಲೂ ರನ್ ಗಳಿಸದ ರೋಹಿತ್ ಶರ್ಮಾ! ಬಿಸಿಸಿಐಗೆ ಹೊಸ ಟೆನ್ಷನ್
2024ರಲ್ಲಿ ರನ್ ಗಳಿಸಲು ಪರದಾಡಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಮೂರು ಪಂದ್ಯಗಳು ರನ್ ಗಳಿಸುವಲ್ಲಿ ವಿಫಲವಾದ ಬಳಿಕ ಕೊನೆಯ ಪಂದ್ಯದಲ್ಲಿ ತಾವೇ ಬೆಂಚ್ ಕಾಯುವ ನಿರ್ಧಾರ ಮಾಡಿದ್ದರು. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಮುನ್ನ ಫಾರ್ಮ್‌ಗೆ ಮರಳಲು ರಣಜಿ ಟ್ರೋಫಿಯಲ್ಲಿ ಆಡಲು ನಿರ್ಧರಿಸಿದ್ದ ರೋಹಿತ್ ಶರ್ಮಾ ದೇಶೀಯ ಪಂದ್ಯದಲ್ಲೂ ನಿರಾಸೆ ಮೂಡಿಸಿದ್ದಾರೆ.
ಗುರುವಾರ ಆರಂಭವಾಗಿರು ಜಮ್ಮ ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 19 ಎಸೆತಗಳಲ್ಲಿ ಕೇವಲ 3 ರನ್‌ಗಳಿಗೆ ಔಟ್ ಆಗಿದ್ದಾರೆ. ಮುಂಬೈ ತಂಡದ ಪರವಾಗಿ ಕಣಕ್ಕಿಳಿದ ಅವರು, ತಮ್ಮ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಫೆಬ್ರವರಿ 18 ರಿಂದ ಆರಂಭವಾಗಲಿರು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲೂ ಇದೇ ಆಟ ಮುಂದುವರೆದರೆ ಇಡೀ ತಂಡದ ಮೇಲೆ ಒತ್ತಡ ಹೆಚ್ಚಾಗಲಿದೆ ಎನ್ನುವ ಆತಂಕ ಶುರುವಾಗಿದೆ.

2023ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಭರ್ಜರಿ ಪ್ರದರ್ಶನ ನೀಡಿದ್ದರು. ಸ್ಫೋಟಕ ಆರಂಭ ನೀಡುತ್ತಿದ್ದ ಅವರು ತಂಡದ ಮೇಲೆ ಒತ್ತಡ ಕಡಿಮೆ ಮಾಡುತ್ತಿದ್ದರು. ಭಾರತ ಫೈನಲ್‌ನಲ್ಲಿ ಸೋತರೂ ಇಡೀ ಪಂದ್ಯಾವಳಿಯಲ್ಲಿ ಭಾರತದ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು, ಇದರಲ್ಲಿ ರೋಹಿತ್ ಶರ್ಮಾ ಕೊಡುಗೆ ತುಂಬಾ ಇತ್ತು.
2024ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದುಕೊಂಡಿತು, ಬ್ಯಾಟಿಂಗ್‌ನಲ್ಲಿ ರೋಹಿತ್ ನಿರೀಕ್ಷಿತ ಪ್ರದರ್ಶನ ನೀಡದೇ ಇದ್ದರೂ, ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಅದಾದ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಟೆಸ್ಟ್, ಏಕದಿನ ಮಾದರಿಯಲ್ಲಿ ಅವರು ನಾಯಕರಾಗಿ ಮುಂದುವರೆದಿದ್ದು ಸದ್ಯ ಅವರ ಫಾರ್ಮ್ ಚಿಂತೆಗೆ ಕಾರಣವಾಗಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಸೋಲು, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತವರಿನಲ್ಲೇ ಮುಖಭಂಗ, ಅದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯಾವಳಿ ಸೋಲುವ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವಲ್ಲಿ ವಿಫಲವಾಗಿದ್ದು ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
ಸತತ ಸೋಲಿನ ಬಳಿಕ ಬಿಸಿಸಿಐ ಮತ್ತು ಕೋಚ್ ಗೌತಮ್ ಗಂಭೀರ್ ಸಭೆ ನಡೆಸಿದ್ದು ತಂಡದ ಆಟಗಾರರಲ್ಲಿ ಶಿಸ್ತಿನ ಕೊರತೆಯಿರುವುದುನ್ನು ಮನಗಂಡಿದ್ದಾರೆ. ಸ್ಟಾರ್ ಆಟಗಾರರು ಕೂಡ ರಣಜಿ ಟ್ರೋಫಿಯಲ್ಲಿ ಆಡಬೇಕು ಎಂದು ತಾಕೀತು ಮಾಡಿದ್ದಾರೆ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಕೂಡ ರಣಜಿಯಲ್ಲಿ ಆಡಬೇಕಿದೆ. ಆದರೆ ಗಾಯದ ಸಮಸ್ಯೆಯಿಂದ ಇಬ್ಬರು ಕಣಕ್ಕಿಳಿದಿಲ್ಲ.
ರೋಹಿತ್ ಶರ್ಮಾ ಮಾತ್ರ ರಣಜಿಯಲ್ಲಿ ಆಡಲು ಸಜ್ಜಾಗಿದ್ದರು. ಮುಂಬೈ ತಂಡದ ಜೊತೆ ಅಭ್ಯಾಸದಲ್ಲಿ ಕೂಡ ಭಾಗವಹಿಸಿದ್ದರು. ಆದರೆ ಇಂದು ಅವರು ನೀಡಿದ ಪ್ರದರ್ಶನ ನೋಡಿ ಅಭಿಮಾನಿಗಳು ಕೂಡ ಬೇಸರಗೊಂಡಿದ್ದಾರೆ. ಫಾರ್ಮ್‌ಗೆ ಮರಳಲು ಅವರಿಗೆ ಸಿಕ್ಕಿದ್ದ ಅವಕಾಶವನ್ನು ಕೈಚೆಲ್ಲಿದ್ದಾರೆ.












Click it and Unblock the Notifications