IPL 2025: ಹಣಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಬಿಟ್ರು! ಗವಾಸ್ಕರ್ ಆರೋಪಕ್ಕೆ ತಿರುಗೇಟು ಕೊಟ್ಟ ರಿಷಬ್ ಪಂತ್
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ಹಲವು ಆಟಗಾರರು ಕೋಟಿ ಕೋಟಿ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ. ರಿಷಬ್ ಪಂತ್ ಈ ಬಾರಿ ಹರಾಜಿನಲ್ಲಿ ಅತಿ ಹೆಚ್ಚು ಹಣ ಪಡೆಯುವ ಆಟಗಾರ ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಉತ್ತಮ ನಂಟು ಹೊಂದಿದ್ದ ಪಂತ್ ತಂಡವನ್ನು ಬಿಟ್ಟು ಹೊರಬರಲು ಕಾರಣವೇನು ಎನ್ನುವುದು ಇನ್ನೂ ನಿಗೂಢವಾಗಿ ಉಳಿದಿದೆ. ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಈ ಬಗ್ಗೆ ಕಮೆಂಟ್ ಮಾಡಿದ್ದು, ಪಂತ್ ಹೊರಬರಲು ಹಣ ಕಾರಣ ಎಂದಿದ್ದಾರೆ.
ರಿಷಬ್ ಪಂತ್ ಹಣದ ವಿಚಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಭಿನ್ನಾಭಿಪ್ರಾಯ ಉಂಟಾಗಿದ್ದು ಅವರು ತಂಡವನ್ನು ಬಿಟ್ಟು ಮೆಗಾ ಹರಾಜಿಗೆ ಬಂದಿದ್ದಾರೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದು, ಇದಕ್ಕೆ ರಿಷಬ್ ಪಂತ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಾನು ತಂಡವನ್ನು ಬಿಟ್ಟಿರುವುದು ಹಣದ ವಿಚಾರಕ್ಕೆ ಅಲ್ಲ ಎಂದು ಹೇಳಿದ್ದಾರೆ.

ಐಪಿಎಲ್ 2025 ರ ಮೆಗಾ ಹರಾಜಿನ ಮೊದಲು ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡ ವೀಡಿಯೊದಲ್ಲಿ, ಮೆಗಾ ಹರಾಜಿನಲ್ಲಿ ತಮ್ಮ ನಿಜವಾದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಸ್ಟಾರ್ ಆಟಗಾರರು ಕೆಲವೊಮ್ಮೆ ತಮ್ಮ ಫ್ರಾಂಚೈಸಿಗಳನ್ನು ತೊರೆಯಲು ನಿರ್ಧರಿಸುತ್ತಾರೆ ಎಂದು ಗವಾಸ್ಕರ್ ಹೇಳಿದರು. ರಿಷಬ್ ಪಂತ್ ವಿಚಾರದಲ್ಲೂ ಅದೇ ಆಗಿತ್ತು ಎಂದು ಹೇಳಿದ ಅವರು, ಪಂತ್ ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಬಹುದು ಎಂದು ಹೇಳಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕವಾಗಿದೆ. ಅವರಿಗೆ ಉತ್ತಮ ನಾಯಕನ ಅಗತ್ಯವಿದೆ, ಪಂತ್ ತಂಡದಲ್ಲಿ ಇಲ್ಲದಿದ್ದರೆ ಹೊಸ ನಾಯಕನನ್ನು ಹುಡುಕಬೇಕಾಗುತ್ತದೆ, ಕೆಲವೊಮ್ಮೆ ಆಟಗಾರನನ್ನು ಉಳಿಸಿಕೊಳ್ಳಬೇಕಾದಾಗ, ಆಟಗಾರ ಮತ್ತು ಫ್ರಾಂಚೈಸಿ ನಡುವೆ ನಿರೀಕ್ಷಿತ ಹಣದ ಬಗ್ಗೆ ಮಾತುಕತೆ ನಡೆಯುತ್ತದೆ ಎಂದು ಹೇಳಿದ್ದಾರೆ.
My retention wasn’t about the money for sure that I can say 🤍
— Rishabh Pant (@RishabhPant17) November 19, 2024
ಗವಾಸ್ಕರ್ ಅವರ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಪಂತ್, ಫ್ರಾಂಚೈಸಿಯಿಂದ ಹೊರಬಂದಿರುವುದು ಹಣದ ವಿಚಾರಕ್ಕಾಗಿ ಅಲ್ಲ ಎಂದು ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಹೊರ ಬರಲು ನಿಜವಾದ ಕಾರಣ ಏನು ಎಂದು ಬಹಿರಂಗಪಡಿಸದೇ ಇದ್ದರೂ, ಹಣದ ವಿಚಾರದಲ್ಲಿ ಮನಸ್ತಾಪ ಉಂಟಾಗಿಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ.
ಯಾವ ತಂಡಕ್ಕೆ ಹೋಗ್ತಾರೆ ಪಂತ್?
ರಿಷಬ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಎಲ್ಲಾ ತಂಡಗಳು ಉತ್ಸುಕವಾಗಿವೆ. ಮುಖ್ಯವಾಗಿ ನಾಯಕನ ಹುಡುಕಾಟದಲ್ಲಿರುವ ಫ್ರಾಂಚೈಸಿಗಳಿಗೆ ಪಂತ್ ಮೊದಲ ಆಯ್ಕೆಯಾಗಿರುತ್ತಾರೆ. ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ರಿಷಬ್ ಪಂತ್‌ಗಾಗಿ ಭಾರಿ ಹೋರಾಟ ನಡೆಯುವ ನಿರೀಕ್ಷೆ ಇದೆ.
ಡೆಲ್ಲಿ ಕ್ಯಾಪಿಟಲ್ಸ್ ಆರ್ ಟಿಎಂ ಬಳಸಿ ವಾಪಸ್ ಪಡೆದುಕೊಂಡರೂ ಅಚ್ಚರಿ ಪಡಬೇಕಾಗಿಲ್ಲ. ಕೆಲವು ಮಾಜಿ ಆಟಗಾರರು ರಿಷಬ್ ಪಂತ್ ₹25 ಕೋಟಿಗಿಂತ ಅಧಿಕ ಮೊತ್ತಕ್ಕೆ ಹರಾಜಾಗಬಹುದು ಎಂದು ಅಂದಾಜಿಸಿದ್ದಾರೆ. ಎಲ್ಲಾ ಪ್ರಶ್ನೆಗಳಿಗೂ ನವೆಂಬರ್ 24-25ರಂದು ಜೆಡ್ಡಾದಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಉತ್ತರ ಸಿಗಲಿದೆ.












Click it and Unblock the Notifications