Rishabh Pant: ದುಬಾರಿ ಆಟಗಾರನ ದುರ್ವರ್ತನೆ; ಮೈದಾನದಲ್ಲೇ ಸಹ ಆಟಗಾರನ ಮೇಲೆ ಕಿರುಚಾಡಿದ ರಿಷಬ್ ಪಂತ್
ಐಪಿಎಲ್ 2025ರ ಮೆಗಾಹರಾಜಿನಲ್ಲಿ ರಿಷಬ್ ಪಂತ್ ಬರೋಬ್ಬರಿ 27 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಭಾರಿ ಸದ್ದು ಮಾಡಿದ್ದರು. ಲಕ್ನೋ ಸೂಪರ್ ಜೈಂಟ್ಸ್ ರಿಷಬ್ ಪಂತ್‌ಗೆ 27 ಕೋಟಿ ರೂಪಾಯಿ ನೀಡಿದ್ದಲ್ಲದೆ, ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿತ್ತು. ಆದರೆ ಪಂತ್ ಈ ಆವೃತ್ತಿಯಲ್ಲಿ ನಾಯಕತ್ವ ಮತ್ತು ಬ್ಯಾಟಿಂಗ್ ಎರಡಲ್ಲೂ ವಿಫಲವಾಗಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಪಂತ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಪಂತ್ 11 ಪಂದ್ಯಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಅರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಭಾನುವಾರ ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂತ್ ತಾಳ್ಮೆ ಕಳೆದುಕೊಂಡರು, ಮೈದಾನದಲ್ಲೇ ಸಹ ಆಟಗಾರನ ಮೇಲೆ ಕಿರುಚಾಡುವ ಮೂಲಕ ತಮ್ಮ ಸಿಟ್ಟು ಹೊರಹಾಕಿದರು.

ರಿಷಬ್ ಪಂತ್ ಒತ್ತಡದಲ್ಲಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಪಂತ್ ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ. ತಂಡದ ಪ್ರದರ್ಶನ ಉತ್ತಮವಾಗಿಲ್ಲ, ಪದೇ ಪದೇ ಸೋಲುಗಳಿಂದ ನಿರಾಶೆಗೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲಿನ ಬಳಿಕ ಪ್ಲೇಆಫ್ ಅವಕಾಶ ಮತ್ತಷ್ಟು ಕಷ್ಟವಾಗಿದ್ದು ಉಳಿದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಸೋತರೂ ಪ್ಲೇಆಫ್ ರೇಸ್‌ನಿಂದ ಹೊರಬೀಳಲಿದ್ದಾರೆ.
ಆಯುಷ್ ಬದೋನಿ ಮೇಲೆ ಕಿರುಚಾಟ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ 10 ಪಂದ್ಯಗಳ ನಂತರ, ಪಂತ್ 112 ಎಸೆತಗಳಲ್ಲಿ ಕೇವಲ 110 ರನ್ ಗಳಿಸಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧ ಕೂಡ 17 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ಔಟಾಗಿದ್ದಾರೆ. ಪಂದ್ಯದ 8ನೇ ಓವರ್‌ನಲ್ಲಿ ವೈಡ್ ಬಾಲ್‌ಗೆ ಸಿಂಗಲ್ ಹೊಡೆಯಲು ಪ್ರಯತ್ನಿಸುತ್ತಿದ್ದ ಆಯುಷ್ ಬದೋನಿ ರನ್ ಓಡುತ್ತಿಲ್ಲ ಎಂದು ರಿಷಬ್ ಪಂತ್ ಗದರಿದರು. ಮುಂದಿನ ಎಸೆತದಲ್ಲೇ ಪಂತ್ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು, ಬ್ಯಾಟ್ ಕೈನಿಂದ ಜಾರಿತು, ಚೆಂಡು ಫೀಲ್ಡರ್ ಕೈಸೇರಿದ್ದರಿಂದ ಪಂತ್ ಔಟಾಗಿ ನಿರಾಸೆಯಿಂದಲೇ ಹೊರನಡೆದರು.
ಅಪಘಾತದಿಂದ ಚೇತರಿಸಿಕೊಂಡು ಮತ್ತೆ ಮೈದಾನಕ್ಕೆ ಮರಳಿದ ಬಳಿಕ ರಿಷಬ್ ಪಂತ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಪಂತ್ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ಕೆಲವೊಮ್ಮೆ ಬೇಜವಾಬ್ದಾರಿ ಹೊಡೆತಕ್ಕೆ ಪ್ರಯತ್ನಿಸಿ ಔಟಾಗುವ ಮೂಲಕ ಟೀಕೆಗೂ ಗುರಿಯಾಗಿದ್ದಾರೆ. ಈ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ ತಲುಪಲು ವಿಫಲವಾದರೆ ಫ್ರಾಂಚೈಸಿ ಪಂತ್ ಬಗ್ಗೆ ಏನು ನಿರ್ಧಾರ ಮಾಡಲಿದೆ ಎನ್ನುವ ಕುತೂಹಲವು ಇದೆ.












Click it and Unblock the Notifications