RCB Vs KKR: ಬಲಿಷ್ಠ ಕೆಕೆಆರ್ ಮಣಿಸಲು ಸಜ್ಜಾಗಿದ್ಯಾ ಆರ್‌ಸಿಬಿ?
ಐಪಿಎಲ್ 2024ರ ಆವೃತ್ತಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಮುಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಸೆಣೆಸಲಿದೆ.
ಏಪ್ರಿಲ್ 21, ಭಾನುವಾರ ಮಧ್ಯಾಹ್ನ 3.30 ಗಂಟೆಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಾದರೂ ಆರ್‌ಸಿಬಿ ಸೋಲಿನ ಸುಳಿಯಿಂದ ಹೊರಬರಲಿ ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕೆಕೆಆರ್ ತಂಡವನ್ನು ಅವರ ತವರಿನಲ್ಲೇ ಸೋಲಿಸುವುದು ಸುಲಭವಲ್ಲ, ಅದಕ್ಕಾಗಿ ಆರ್‌ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸಿರಾಜ್, ಮ್ಯಾಕ್ಸ್ ವೆಲ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಲಾಕಿ ಫರ್ಗ್ಯುಸನ್ ಆಡಿದರೂ ಆರ್‌ಸಿಬಿ ಬೌಲರ್ ಗಳು 288 ರನ್ ಬಿಟ್ಟುಕೊಟ್ಡಿದ್ದರು. ಕೆಕೆಆರ್ ಕೂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದು, ಅವರನ್ನು ಕಟ್ಟಿ ಹಾಕಲು ರಣತಂತ್ರ ರೂಪಿಸಬೇಕಿದೆ.
ಸುನಿಲ್ ನರೇನ್, ಫಿಲ್ ಸಾಲ್ಟ್, ರಿಂಕು ಸಿಂಗ್, ಆಂಡ್ರೆ ರಸೆಲ್ ಕೆಕೆಆರ್ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಈ ನಾಲ್ವರನ್ನು ಅದಷ್ಟೆ ಬೇಗನೆ ಔಟ್ ಮಾಡಿದರೆ ಮಾತ್ರ ಕೆಕೆಆರ್ ಮೇಲೆ ಒತ್ತಡ ಹಾಕಬಹುದು.
ತಂಡದಲ್ಲಿ ಬದಲಾವಣೆ
ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಮ್ಯಾಕ್ಸ್ ವೆಲ್ ಮತ್ತು ಸಿರಾಜ್ ಕೆಕೆಆರ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದು ವೇಳೆ ಕೆಕೆಆರ್ ವಿರುದ್ಧ ಕೂಡ ವಿಶ್ರಾಂತಿ ಪಡೆದರೆ, ರೀಸ್ ಟೋಪ್ಲೆ, ಲಾಕಿ ಫರ್ಗ್ಯುಸನ್ ಇಬ್ಬರೂ ಆಡಬಹುದು. ಅಥವಾ ಬ್ಯಾಟಿಂಗ್‌ನಲ್ಲಿ ಬಲ ಹೆಚ್ಚಿಸಲು ಇಬ್ಬರಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡಿ ಕ್ಯಾಮೆರಾನ್ ಗ್ರೀನ್ ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಇದೆ.
ಕೊಹ್ಲಿ, ಡುಪ್ಲೆಸಿಸ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್ ಆರ್‌ಸಿಬಿ ಬ್ಯಾಟಿಂಗ್ ಬಲವಾಗಿದ್ದಾರೆ. ವಿಲ್ ಜ್ಯಾಕ್ಸ್, ಲೊಮ್ರೋರ್ ಅಬ್ಬರಿಸಿದರೆ ಆರ್‌ಸಿಬಿ ಗೆಲುವು ಸುಲಭವಾಗಲಿದೆ.
ಪಿಚ್ ವರದಿ
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂಗಳ ಬ್ಯಾಟರ್ ಗಳ ಸ್ವರ್ಗವಾಗಿದೆ. ಸ್ಪಿನ್ ಬೌಲರ್ ಗಳಿಗೆ ಸಹಕಾರ ಸಿಗುವ ಸಾಧ್ಯತೆ ಇದ್ದರೂ, ರನ್‌ಗಳ ಹೊಳೆ ಹರಿಯಲಿದೆ. ಕೆಕೆಆರ್ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ, ರಾಜಸ್ಥಾನ 224 ರನ್‌ಗಳ ಗುರಿಯನ್ನು ಚೇಸ್ ಮಾಡಿ ಗೆದ್ದಿತ್ತು. ಮಧ್ಯಾಹ್ನದ ಪಂದ್ಯವಾಗಿರುವ ಕಾರಣ, ಟಾಸ್ ಅಷ್ಟೇನೂ ಪ್ರಮುಖ ಪಾತ್ರ ವಹಿಸಲಿಲ್ಲ.
ಆರ್‌ಸಿಬಿ ಸಂಭಾವ್ಯ ಆಡುವ ಬಳಗ
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್/ ಕ್ಯಾಮೆರಾನ್ ಗ್ರೀನ್/ ರೀಸ್ ಟೋಪ್ಲೆ, ರಜತ್ ಪಾಟಿದಾರ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಲಾಕಿ ಫರ್ಗ್ಯುಸನ್, ಮೊಹಮ್ಮದ್ ಸಿರಾಜ್, ವಿಜಯ್ ಕುಮಾರ್ ವೈಶಾಖ್, ಆಕಾಶ್ ದೀಪ್/ ರಜನ್ ಕುಮಾರ್.












Click it and Unblock the Notifications