RCB vs CSK: ಬೆಂಗಳೂರಿನಲ್ಲಿ ಆರ್‌ಸಿಬಿ vs ಸಿಎಸ್‌ಕೆ ಕದನ; ಪಂದ್ಯ ಯಾವಾಗ?
ಐಪಿಎಲ್ 2025ರ ಆವೃತ್ತಿಯಲ್ಲಿ ಸದ್ಯ ಟೇಬಲ್ ಟಾಪರ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ಲೇಆಫ್ ತಲುಪುವ ಸನಿಹದಲ್ಲಿದೆ. ಬರೀ ಪ್ಲೇಆಫ್ ತಲುಪುವುದಷ್ಟೇ ಅಲ್ಲ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನದಲ್ಲಿ ಪ್ಲೇಆಫ್ ತಲುಪಬೇಕು ಎನ್ನುವುದು ತಂಡದ ಗುರಿ ಎಂದು ಈಗಾಗಲೇ ನಾಯಕ ರಜತ್ ಪಟಿದಾರ್ ತಿಳಿಸಿದ್ದಾರೆ. ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಟ್ಟ ಹಾಕಿರುವ ಆರ್ ಸಿಬಿ ಮುಂದಿನ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸಿಎಸ್‌ಕೆ ತಂಡವನ್ನು ಎದುರಿಸಲಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಆರ್ ಸಿಬಿ ಸದ್ಯ ತವರಿಗೆ ವಾಪಸಾಗಿದೆ. ಸತತವಾಗಿ ಪಂದ್ಯಗಳನ್ನು ಆಡಿದ ಬಳಿಕ ಸಿಎಸ್‌ಕೆ ಪಂದ್ಯಕ್ಕೆ ಮುನ್ನ ಆಟಗಾರರಿಗೆ ವಿಶ್ರಾಂತಿ ಪಡೆಯಲು ಅವಕಾಶ ಸಿಕ್ಕಿದೆ. ಮೇ 3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಸಿಎಸ್‌ಕೆ ತಂಡವನ್ನು ಎದುರಿಸಲಿದೆ.

ಕಳೆದ ವರ್ಷದ ಫಲಿತಾಂಶ ರಿಪೀಟ್!
2024ರ ಐಪಿಎಲ್‌ನ ಕೊನೆಯ ಲೀಗ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆದಿತ್ತು. ಸಿಎಸ್‌ಕೆ ಮತ್ತು ಆರ್ ಸಿಬಿ ಪ್ಲೇಆಫ್ ಪ್ರವೇಶ ಪಡೆಯಲು ಅದು ಮಾಡು ಇಲ್ಲವೆ ಮಡಿ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ರೋಚಕ ಗೆಲುವು ಸಾಧಿಸಿದ್ದ ಆರ್ ಸಿಬಿ ಪ್ಲೇಆಫ್ ಪ್ರವೇಶಿಸಿತ್ತು. ಪಂದ್ಯಾವಳಿಯಿಂದಲೇ ಹೊರಬೀಳುವ ಹಂತದಿಂದ ಸತತವಾಗಿ 6 ಪಂದ್ಯ ಗೆದ್ದು ಪ್ಲೇಆಫ್‌ಗೆ ತಲುಪಿದ್ದು ದೊಡ್ಡ ಸಾಧನೆಯಾಗಿತ್ತು.
ಕಳೆದ ವರ್ಷದ ಆ ಸೋಲಿನ ಬಳಿಕ ಸಿಎಸ್‌ಕೆ ಹಣೆಬರಹವೇ ಬದಲಾದಂತಿದೆ. ಈ ಆವೃತ್ತಿಯಲ್ಲಿ ಸಿಎಸ್‌ಕೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಕಳೆದ ವರ್ಷ ಆರ್ ಸಿಬಿ ಇದ್ದ ಸ್ಥಾನದಲ್ಲಿ ಈ ವರ್ಷ ಸಿಎಸ್‌ಕೆ ಇದ್ದು ಆರ್ ಸಿಬಿ ಮಾಡಿದ್ದ ಮ್ಯಾಜಿಕ್ ಮಾಡಬಹುದು ಎಂದು ನಂಬಿದೆ.
ಡೆವಾಲ್ಡ್ ಬ್ರೆವಿಸ್, ಆಯುಶ್ ಮ್ಹಾತ್ರೆ ಸಿಎಸ್‌ಕೆ ತಂಡ ಸೇರಿಕೊಂಡ ಬಳಿಕ ಬ್ಯಾಟಿಂಗ್‌ಗೆ ಸ್ವಲ್ಪ ಬಲ ಬಂದಂತಾಗಿದೆ. ಆರ್ ಸಿಬಿ ವಿರದ್ಧ ಮೇ 3ರಂದು ಪಂದ್ಯ ಆಡುವ ಮುನ್ನ ಏಪ್ರಿಲ್ 30 ರಂದು ಚೆನ್ನೈನಲ್ಲಿ ಪಂಜಾವ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಜ್ವರದಿಂದಾಗಿ ಅಲಭ್ಯರಾಗಿದ್ದ ಫಿಲ್ ಸಾಲ್ಟ್ ಮೇ3ರಂದು ಸಿಎಸ್‌ಕೆ ವಿರುದ್ದದ ಪಂದ್ಯದಲ್ಲಿ ವಾಪಸಾಗಲಿದ್ದಾರೆ. ಉಳಿದಂತೆ ಆರ್ ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ.
ಉಭಯ ತಂಡಗಳ ಆಡುವ ಬಳಗ
ಆರ್ ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಸಿಎಸ್‌ಕೆ: ಶೇಕ್ ರಶೀದ್, ಆಯುಷ್ ಮ್ಹಾತ್ರೆ, ದೀಪಕ್ ಹೂಡಾ, ಸ್ಯಾಮ್ ಕರ್ರಾನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಎಂಎಸ್ ಧೋನಿ (ನಾಯಕ), ನೂರ್ ಅಹ್ಮದ್, ಖಲೀಲ್ ಅಹ್ಮದ್, ಮಥೀಶ ಪತಿರಾನ.












Click it and Unblock the Notifications