RCB: ಆರ್‌ಸಿಬಿ ಸ್ಟಾರ್ ಪ್ಲೇಯರ್ ಭರ್ಜರಿ ಶತಕ; ಮತ್ತೊಮ್ಮೆ ಮಿಂಚಿದ ಕೃನಾಲ್ ಪಾಂಡ್ಯ
ಆರ್‌ಸಿಬಿ ಅಭಿಮಾನಿಗಳಿಗೆ ಇಂದು ಸಖತ್ ಭಾನುವಾರ ಎನ್ನಬಹುದು. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ ಸಿಬಿ ಬಲಿಷ್ಠ ತಂಡವನ್ನು ಕಟ್ಟಿದೆ. ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್‌ರನ್ನು ಮಾತ್ರ ರಿಟೇನ್ ಮಾಡಿಕೊಂಡಿತ್ತು. ಮೆಗಾ ಹರಾಜಿನಲ್ಲಿ ಆಲ್‌ರೌಂಡರ್ ಗಳಿಗೆ ಮಣೆ ಹಾಕಿದ್ದು, ತಂಡವನ್ನು ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಬಲಿಷ್ಠವಾಗಿಸಿದೆ. ದೇಶೀಯ ಕ್ರಿಕೆಟ್‌ನಲ್ಲಿ ಆರ್ ಸಿಬಿ ಆಟಗಾರರು ಅಬ್ಬರಿಸುತ್ತಿದ್ದು ಅಭಿಮಾನಿಗಳ ಖುಷಿ ಹೆಚ್ಚಾಗಿದೆ.
20 ಲಕ್ಷ ರೂಪಾಯಿಗೆ ಆರ್ ಸಿಬಿ ಸೇರಿದ್ದ ರಜತ್ ಪಟಿದಾರ್ ಈ ಬಾರಿ ಬರೋಬ್ಬರಿ 11 ಕೋಟಿ ರೂಪಾಯಿ ರಿಟೇನ್ ಆಗಿದ್ದರು. 2024ರ ಐಪಿಎಲ್‌ನಲ್ಲಿ ಆರ್ ಸಿಬಿಗೆ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದರು. 2025ರ ಐಪಿಎಲ್‌ನಲ್ಲಿ ಕೂಡ ಅವರು ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. ಇತ್ತೀಚೆಗೆ ಮುಗಿದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡದ ನಾಯಕರಾಗಿದ್ದ ಅವರು, ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿದ್ದರು. ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಿದ್ದರು.

ಈಗ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲೂ ರಜತ್ ಪಟಿದಾರ್ ಉತ್ತಮ ಪ್ರದರ್ಶನ ಮುಂದುವರೆಸಿದ್ದಾರೆ. ಭಾನುವಾರ ನಡೆದ ಬೆಂಗಾಲ್ ವಿರುದ್ಧದ ಪಂದ್ಯದಲ್ಲಿ ರಜತ್ ಪಟಿದಾರ್ ಭರ್ಜರಿ ಶತಕ ಸಿಡಿಸುವ ಮೂಲಕ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟಿದ್ದಾರೆ.
ಬೆಂಗಾಲ್ ವಿರುದ್ಧ ಗೆದ್ದ ಮಧ್ಯಪ್ರದೇಶ
ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 269 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಮಧ್ಯಪ್ರದೇಶ 46.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 271 ರನ್ ಗಳಿಸುವ ಮೂಲಕ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. 2 ರನ್ ಗಳಿಸಿದ್ದಾಗ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮಧ್ಯಪ್ರದೇಶಕ್ಕೆ ರಜತ್ ಪಟಿದಾರ್ ಆಸರೆಯಾದರು. ಪಟಿದಾರ್ 137 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 132 ರನ್ ಗಳಿಸಿದರು. ಶುಭಂ ಶ್ಯಾಮ್‌ಸುಂದರ್ 99 ರನ್ ಗಳಿಸಿದರು.
ಕೃನಾಲ್ ಪಾಂಡ್ಯ ಆಲ್‌ರೌಂಡ್ ಪ್ರದರ್ಶನ
ಆರ್ ಸಿಬಿಯ ಆಲ್‌ರೌಂಡರ್ ಬರೋಡಾ ತಂಡದ ನಾಯಕತ್ವ ವಹಿಸಿಕೊಂಡಿದ್ದು, ಬ್ಯಾಟಿಂಗ್ ಬೌಲಿಂಗ್ ಎರಡಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ಎರಡು ಪ್ರಮುಖ ವಿಕೆಟ್ ಪಡೆದ ಅವರು, ಬಳಿಕ ಅಜೇಯ 35 ರನ್ ಗಳಿಸಿದರು. ಅವರ ಆಲ್‌ರೌಂಡರ್ ಪ್ರದರ್ಶನದ ನೆರವಿನಿಂದ ಬರೋಡಾ 5 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಬರೋಡಾ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.












Click it and Unblock the Notifications