RCB: ತಾಯಿ ಕನಸು ನನಸು ಮಾಡಲು ಹೊರಟ ಆರ್ಸಿಬಿ ವೇಗಿ ರಸಿಕ್ ದಾರ್ ಸಲಾಂ; ಇಲ್ಲಿದೆ ರೋಚಕ ಸ್ಟೋರಿ
RCB Rasikh Salam: ಐಪಿಎಲ್ 2026 ಹಬ್ಬ ಅದ್ಧೂರಿಯಾಗಿ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೂ ಆಡಿದ 6ರಲ್ಲಿ ನಾಲ್ಕೂ ಪಂದ್ಯಗಳನ್ನು ಗೆದ್ದಿದೆ. ಇತ್ತೀಚೆಗಷ್ಟೇ ತವರು ಮೈದಾನ ಚಿನ್ನಸ್ವಾಮಿಯಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿತ್ತು. ಇದರ ಬೆನ್ನಲ್ಲೇ ಇದೀಗ ಆರ್ಸಿಬಿ ವೇಗಿ ರಸಿಕ್ ದಾರ್ ಸಲಾಂ ಅವರು, ತಮ್ಮ ಮಹಾದಾಸೆಯೊಂದನ್ನ ಬಹಿರಂಗಪಡಿಸಿದ್ದಾರೆ.
ಈ ಬಾರಿ ಐಪಿಎಲ್ನಲ್ಲಿ ರಸಿಕ್ ದಾರ್ ಸಲಾಂ ಅದ್ಭುತ ಫಾರ್ಮ್ನಲ್ಲಿದ್ದು, ಕೇವಲ ಮೂರು ಪಂದ್ಯಗಳಲ್ಲಿ ಐದು ವಿಕೆಟ್ ಪಡೆದಿದ್ದಾರೆ. ಇದರಲ್ಲಿ 24 ರನ್ಗಳಿಗೆ 4 ವಿಕೆಟ್ ಪಡೆದ ಪಂದ್ಯಶ್ರೇಷ್ಠ ಪ್ರದರ್ಶನವೂ ಸೇರಿದೆ. ಇನ್ನೂ ಇದೀಗ ತಮಗೆ ಬೆಂಬಲ ನೀಡಿದ ತನ್ನ ತಾಯಿ ಕನಸನ್ನ ನನಸು ಮಾಡುವ ಪ್ರತಿಜ್ಞೆ ಮಾಡಿ ಗಮನ ಸೆಳೆದಿದ್ದಾರೆ.

ಮನದೊಳಗಿನ ಮಹಾದಾಸೆ ಬಿಚ್ಚಿಟ್ಟ ರಸಿಕ್ ಸಲಾಂ
"ನಾನು ಐಪಿಎಲ್ ಅಥವಾ ಭಾರತ ತಂಡದ ಬಗ್ಗೆ ಯೋಚಿಸಿ ಕ್ರಿಕೆಟ್ ಆಡಲು ಪ್ರಾರಂಭಿಸಲಿಲ್ಲ. ಈ ಪ್ರಯಾಣವು ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬ ಅರಿವು ನನಗಿರಲಿಲ್ಲ. ಆದರೆ ಈಗ, ಭಾರತಕ್ಕಾಗಿ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಆಡುವುದು ನನ್ನ ಗುರಿಯಾಗಿದೆ," ಎಂದು ರಸಿಕ್ ದಾರ್ ಸಲಾಂ ರಿವೀಲ್ ಮಾಡಿದ್ದಾರೆ.
ವಾಂಖೇಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಸಿಕ್ ಅವರ ಛಲ ಎದ್ದು ಕಾಣುತ್ತಿತ್ತು. ಸ್ನಾಯು ಸೆಳೆತದಿಂದ ಬಳಲುತ್ತಿದ್ದರೂ ಸಹ, ಅವರು ಮಾರಕ ಬೌಲಿಂಗ್ ದಾಳಿ ಮಾಡಿ 23 ರನ್ಗಳಿಗೆ 1 ವಿಕೆಟ್ ಪಡೆಯುವ ಮೂಲಕ ಈ ಸೀಸನ್ನ ತಮ್ಮ ಮೊದಲ ಭರ್ಜರಿ ಪ್ರದರ್ಶನ ನೀಡಿದರು.
ಕಾಲು ನೋವಿನ ನಡುವೆಯೂ ಉತ್ತಮ ಪ್ರದರ್ಶನ
"ನಾನು ಬೌಲಿಂಗ್ ಮಾಡಲು ಬಂದಾಗ, ನನಗೆ ಸ್ನಾಯು ಸೆಳೆತ ಉಂಟಾಯಿತು. ಅಂತಹ ಅನುಭವ ನನಗೆ ಈ ಹಿಂದೆ ಎಂದೂ ಆಗಿರಲಿಲ್ಲ. ಬಹುತೇಕ ಪ್ರತಿ ಎಸೆತದ ನಂತರವೂ ನನಗೆ ಸೆಳೆತ ಕಂಡುಬರುತ್ತಿತ್ತು. ಚೆಂಡನ್ನು ಎಸೆಯುವಾಗ ನಾನು ಕೆಳಗೆ ಬೀಳುತ್ತಿದ್ದೆ ಮತ್ತು ಸರಿಯಾಗಿ ಬಾಗಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಆಗ ಮನಸ್ಸಿನಲ್ಲಿದ್ದ ಏಕೈಕ ಆಲೋಚನೆಯೆಂದರೆ, ಹೇಗಾದರೂ ಮಾಡಿ ಓವರ್ ಪೂರ್ಣಗೊಳಿಸಬೇಕೆಂಬುದು. ನಾನು ಅದನ್ನು ಪೂರ್ಣಗೊಳಿಸಿದರೆ ಮಾತ್ರ ತಂಡವು ಉತ್ತಮ ಸ್ಥಿತಿಯಲ್ಲಿರುತ್ತದೆ ಎಂದು ನನಗೆ ಅನ್ನಿಸಿತು," ಎಂದು ರಸಿಕ್ ಹೇಳಿದ್ದಾರೆ.
ಆರ್ಸಿಬಿ ಬೌಲಿಂಗ್ ಕೋಚ್ ಹೇಳಿದ್ದೇನು?
ಆರ್ಸಿಬಿ ಬೌಲಿಂಗ್ ಕೋಚ್ ಓಂಕಾರ್ ಸಾಳ್ವಿ ಅವರು ರಸಿಕ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಅವರಲ್ಲಿ ಒಂದು ವಿಶೇಷವಾದ ಛಲ ಮತ್ತು ವ್ಯಕ್ತಿತ್ವವಿದೆ. ಜಮ್ಮು ಮತ್ತು ಕಾಶ್ಮೀರದ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಾ, ಅಲ್ಲಿನ ಕಷ್ಟದ ಜೀವನವನ್ನು ಎದುರಿಸಿ, ಕ್ರಿಕೆಟ್ ಆಡಲು ದೀರ್ಘಕಾಲದವರೆಗೆ ಪ್ರಯಾಣಿಸುತ್ತಿದ್ದ ಅವರ ಹಿನ್ನೆಲೆಯೇ ಅವರು ಒಬ್ಬ ಆಟಗಾರನಾಗಿ ಬೆಳೆದಿರುವ ರೀತಿಯಲ್ಲಿ ಎದ್ದು ಕಾಣುತ್ತಿದೆ," ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಕೋಚ್ ಓಂಕಾರ್ ಸಾಳ್ವಿ ಅವರು, "ಅವರಲ್ಲಿದ್ದ ಸ್ಪರ್ಧಾತ್ಮಕ ಮನೋಭಾವವನ್ನು ನಾನು ಗಮನಿಸಿದ್ದೇನೆ. ಚೆಂಡನ್ನು ಎರಡು ಕಡೆ ಸ್ವಿಂಗ್ ಮಾಡುವುದರ ಜೊತೆಗೆ, ಅವರ ಬಳಿ 'ಸ್ಲೋಯರ್ ಒನ್' (ನಿಧಾನಗತಿಯ ಎಸೆತ) ಅಸ್ತ್ರವಿತ್ತು. ಅಷ್ಟೇ ಅಲ್ಲದೆ, ಟಿ20 ಕ್ರಿಕೆಟ್ ಅನ್ನು ಎದುರಿಸುವ ವಿಷಯದಲ್ಲಿ ಅವರು ವಿಭಿನ್ನವಾದ ದೃಷ್ಟಿಕೋನವನ್ನು ಹೊಂದಿದ್ದಾರೆ," ಎಂದು ಹೇಳಿದರು.
"ರಸಿಕ್ ದಾರ್ ಸಲಾಂ ಅವರು ಯಾವಾಗಲೂ ಕಠಿಣ ಶ್ರಮ ಪಡುತ್ತಿದ್ದರು. ಪಂದ್ಯದಿಂದ ಹೊರಗಿದ್ದಾಗಲೂ ತಾವು ನೋಡುತ್ತಿದ್ದ ಪ್ರತಿಯೊಂದು ಪಂದ್ಯದಿಂದ ಏನನ್ನಾದರೂ ಕಲಿಯಲು ಪ್ರಯತ್ನಿಸುತ್ತಿದ್ದರು. ಅಷ್ಟೇ ಅಲ್ಲದೆ, ಅವರದೇ ಆದ ಕೆಲವು ಅಭಿಪ್ರಾಯಗಳನ್ನು ಹೊಂದಿದ್ದರು. ಅವುಗಳ ಬಗ್ಗೆ ನಾವು ಪಂದ್ಯದ ನಂತರದ ಅಭ್ಯಾಸದ ಸಮಯದಲ್ಲಿ ಚರ್ಚಿಸುತ್ತಿದ್ದೆವು. ಅವರಲ್ಲಿ ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಅದ್ಭುತ ಸಾಮರ್ಥ್ಯವಿದೆ," ಎಂದು ಹೇಳಿದರು.
ತಾಯಿ ಬೆಂಬಲ ನೆನೆದ ರಸಿಕ್ ದಾರ್ ಸಲಾಂ
"ನಾನು ವೃತ್ತಿಪರ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ, ನಮ್ಮ ಕುಟುಂಬದವರು ಮತ್ತು ಸಂಬಂಧಿಕರು ಇದನ್ನು ಒಂದು ವೃತ್ತಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಏಕೆಂದರೆ ನಮ್ಮ ಪ್ರದೇಶದಿಂದ ಕ್ರಿಕೆಟ್ ಆಡುವವರು ಬಹಳ ಕಡಿಮೆ ಜನರಿದ್ದರು. ಆದರೆ, ನನ್ನ ತಾಯಿ ಯಾವಾಗಲೂ ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ಬಾಲ್ಯದಿಂದಲೂ ಅವಳು, ನನ್ನ ಮಗ ಒಬ್ಬ ಕ್ರಿಕೆಟಿಗನಾಗುತ್ತಾನೆ ಎಂದು ಹೇಳುವ ಮೂಲಕ ಬೆಂಬಲಿಸುತ್ತಿದ್ದರು," ಎಂದು ರಸಿಕ್ ದಾರ್ ಸಲಾಂ ಹೇಳಿದರು.
ಇರ್ಫಾನ್ ಪಠಾಣ್ ಅವರಿಂದ ಮಾರ್ಗದರ್ಶನ
ರಸಿಖ್ ಅವರ ಈ ಪ್ರಯಾಣವು ಅತ್ಯಂತ ಕಠಿಣವಾಗಿತ್ತು. ಟ್ರಯಲ್ಸ್ಗಳಲ್ಲಿ ಭಾಗವಹಿಸಲು ಅವರು ಸುದೀರ್ಘ ಪ್ರಯಾಣ ಮಾಡಬೇಕಿತ್ತು. ಈ ಹಂತದಲ್ಲಿ ಅವರಿಗೆ ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಅವರ ಮಾರ್ಗದರ್ಶನ ಸಿಕ್ಕಿತು. ನಂತರ ಅವರು ಕೆಕೆಆರ್ ತಂಡಕ್ಕೆ ಆಯ್ಕೆಯಾದರು. ಆದರೂ, ಗಾಯದ ಸಮಸ್ಯೆಗಳು ಅವರನ್ನು ಪಂದ್ಯಗಳಿಂದ ಹೊರಗುಳಿಯುವಂತೆ ಮಾಡಿದರು. ಈ ನಡುವೆಯೇ ಅವರು ಸುಮಾರು ಎರಡು ವರ್ಷಗಳ ಕಾಲ ಕ್ರಿಕೆಟ್ನಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಯಿತು.
"ನಾನು ಮೊದಲ ಬಾರಿಗೆ ಅಂಡರ್ 19 ಆಯ್ಕೆ ಪ್ರಕ್ರಿಯೆಗೆ ಹೋದಾಗ, ಅದರ ಸರಿಯಾದ ಕ್ರಮವೇ ನನಗೆ ತಿಳಿದಿರಲಿಲ್ಲ. ಆ ವರ್ಷ ನಾನು ಆಯ್ಕೆಯಾಗಲಿಲ್ಲ. ಮರು ವರ್ಷ ನಾನು ಮತ್ತೆ ಹೋದಾಗ, ಅಲ್ಲಿ ಇರ್ಫಾನ್ ಪಠಾಣ್ ಇದ್ದರು. ನಾನು ಕೆಲವು ಎಸೆತಗಳನ್ನು ಎಸೆಯುವುದನ್ನು ನೋಡಿದ ತಕ್ಷಣ, ಅವರು ನನ್ನನ್ನ ತಡೆದು ಮಾರ್ಗದರ್ಶನ ನೀಡಲು ಪ್ರಾರಂಭಿಸಿದರು. ಆಗಲೇ ನನಗೆ ಅನ್ನಿಸಿದ್ದು, ಬಹುಶಃ ಅವರು ನನ್ನಲ್ಲಿ ಏನೋ ಒಂದು ವಿಶೇಷತೆಯನ್ನು ಕಂಡಿದ್ದಾರೆ ಎಂದು ಗೊತ್ತಾಯಿತು," ಅಂತಾ ಹೇಳಿದರು.
"ನಂತರ ಎರಡು ಪಂದ್ಯಗಳನ್ನು ಆಡಿದ ಮೇಲೆ ನನಗೆ ಬೆನ್ನು ನೋವು ಕಾಣಿಸಿಕೊಂಡಿತು. ಚೇತರಿಸಿಕೊಳ್ಳುವ ಹಂತದಲ್ಲಿದ್ದಾಗ ಮತ್ತೆ ಗಾಯವಾಯಿತು. ಆ ಸಮಯದಲ್ಲಿ ನನಗೆ ಅರ್ಥವಾಗಿದ್ದು ಏನೆಂದರೆ, ನಾನು ಯಾವುದಕ್ಕೂ ಅವಸರ ಮಾಡಬಾರದು ಎಂದು. ಅದು ಎಷ್ಟೇ ಸಮಯ ತೆಗೆದುಕೊಂಡರೂ ಸರಿ, ನಾನು ಸರಿಯಾದ ಕ್ರಮವನ್ನೇ ಅನುಸರಿಸಬೇಕು ಎಂದು ನಿರ್ಧರಿಸಿದೆ," ಎಂದು ರಸಿಕ್ ಹೇಳಿದರು.
ಇನ್ನೂ ಮೆಗಾ ಹರಾಜಿನಲ್ಲಿ ಆರ್ಸಿಬಿ ರಸಿಕ್ ದಾರ್ ಸಲಾಂ ಅವರ ಮೇಲೆ ಭರವಸೆಯಿಟ್ಟು, 6 ಕೋಟಿ ರೂಪಾಯಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಆರ್ಸಿಬಿ ಪ್ರಶಸ್ತಿ ಗೆದ್ದ 2025ರ ಸೀಸನ್ನಲ್ಲಿ ಅವರಿಗೆ ಹೆಚ್ಚಿನ ಪಂದ್ಯಗಳನ್ನು ಆಡಲು ಅವಕಾಶ ಸಿಗದಿದ್ದರೂ, ತಂಡದ ಹಿರಿಯ ಬೌಲರ್ಗಳಿಂದ ಕಲಿಯುವ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡರು.
"ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಅವರಂತಹ ಆಟಗಾರರೊಂದಿಗೆ ಕೆಲಸ ಮಾಡುವಾಗ ನಾನು ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದೆ. ಒಂದು ನಿರ್ದಿಷ್ಟ ಸಮಯದಲ್ಲಿ ಅವರು ಅಂತಹದ್ದೇ ಎಸೆತವನ್ನು ಏಕೆ ಎಸೆದರು ಎಂದು ತಿಳಿದುಕೊಳ್ಳಲು ಬಯಸುತ್ತಿದ್ದೆ. ನನಗೆ ಕೇವಲ ಕಲಿಯುವ ಹಂಬಲವಿತ್ತು," ಎಂದು ಹೇಳಿದರು. ಒಟ್ಟಿನಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಲು ತಾವು ಏನೆಲ್ಲಾ ಕಷ್ಟಗಳು ಎದುರಾದವು ಹಾಗೂ ಮುಂದಿನ ಗುರಿ ಏನು ಎನ್ನವುದನ್ನು ರಸಿಕ್ ದಾರ್ ಸಲಾಂ ರವೀಲ್ ಮಾಡಿ ಗಮನ ಸೆಳೆದಿದ್ದಾರೆ.












Click it and Unblock the Notifications