RCB vs GG: ತವರಿನಲ್ಲಿ ಆರ್ಸಿಬಿಗೆ ಹ್ಯಾಟ್ರಿಕ್ ಸೋಲು
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಹ್ಯಾಟ್ರಿಕ್ ಸೋಲು ಕಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು. ಎಲ್ಲಿಸ್ ಪೆರ್‍ರಿ ರನ್ ಗಳಿಸದೇ ಇದ್ದರೆ ಆರ್ ಸಿಬಿ ಬ್ಯಾಟಿಂಗ್ ದುರ್ಬಲವಾಗಿದೆ ಎನ್ನುವುದು ಇಂದು ಸಾಬೀತಾಗಿದೆ.
ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 125 ರನ್ ಕಲೆಹಾಕಿತು. ಸ್ಮೃತಿ ಮಂಧಾನ ಮತ್ತೊಮ್ಮೆ ರನ್ ಗಳಿಸುವಲ್ಲಿ ವಿಫಲವಾದರು 20 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿದರು. ವ್ಯಾಟ್ ಹಾಡ್ಜ್ 4 ರನ್ ಗಳಿಸಿದರೆ, ಕಳೆದ ಎರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿ ಆಸರೆಯಾಗಿದ್ದ ಎಲ್ಲಿಸ್ ಪೆರ್‍ರಿ ರನ್ ಗಳಿಸುವ ಮುನ್ನವೇ ಔಟಾದರು.

ರಾಘ್ವಿ ಬಿಸ್ಟ್ 22 ರನ್ ಗಳಿಸಿದರೆ, ಕನಿಕಾ ಅಹುಜಾ 33 ರನ್ ಗಳಿಸಿ ಆಸರೆಯಾದರು. ರಿಚಾ ಘೋಷ್ 9 ರನ್ ಗಳಿಸಿದರೆ, ಜಾರ್ಜಿಯಾ ವೇರಂ 20 ರನ್ ಗಳಿಸಿದರು. ಕಿಮಾ ಗಾರ್ತ್ 14 ರನ್ ಗಳಿಸಿದರು. ಗುಜರಾತ್ ಪರ ತನುಜಾ ಕನ್ವರ್, ಡಿಯೇಂದ್ರ ಡಾಟಿನ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಆಶ್ಲೆ ಗಾರ್ಡ್ನರ್ ಮತ್ತು ಕಾಶ್ವೀ ಗೌತಮ್ ತಲಾ 1 ವಿಕೆಟ್ ಪಡೆದರು.
ಆಶ್ಲೆ ಗಾರ್ಡ್ನರ್ ಅರ್ಧಶತಕದ ಆಸರೆ
126 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ನಿಧಾನಗತಿಯ ಆರಂಭ ಪಡೆಯಿತು. ದಯಾಳ್ ಹೇಮಲತಾ 11 ರನ್ ಗಳಿಸಿದರೆ, ಬೆತ್ ಮೂನಿ 17 ರನ್ ಗಳಿಸಿದರು. ಹರ್ಲೀನ್ ಡಿಯೋಲ್ ಕೇವಲ 5 ರನ್ ಗಳಿಸಿ ಔಟಾದರು. ಆದರೆ ಬಳಿಕ ಬಂದ ನಾಯಕಿ ಆಶ್ಲೆ ಗಾರ್ಡ್ನರ್ 31 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಸಹಿತ 58 ರನ್ ಗಳಿಸುವ ಮೂಲಕ ತಂಡವನ್ನು ಸುಲಭ ಗೆಲುವಿನತ್ತ ಕರೆದೊಯ್ದರು. ಲಿಚ್‌ಫೀಲ್ಡ್ 21 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿ ತಂಡಕ್ಕೆ ನೆರವಾದರು.
ಈ ಸೋಲಿನ ಮೂಲಕ ಆರ್ ಸಿಬಿ ತವರಿನಲ್ಲಿ ಹ್ಯಾಟ್ರಿಕ್ ಸೋಲಿನ ನಿರಾಸೆ ಅನುಭವಿಸಿದೆ. ಮಾರ್ಚ್ 1ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬೆಂಗಳೂರಿನಲ್ಲಿ ಕೊನೆಯ ಪಂದ್ಯ ಆಡಲಿದೆ. ಮಾರ್ಚ್ 3ರಿಂದ ನಡೆಯುವ ಪಂದ್ಯಗಳು ಲಕ್ನೋದಲ್ಲಿ ನಡೆಯಲಿವೆ. ಪ್ಲೇ ಆಫ್ ದೃಷ್ಟಿಯಿಂದ ಆರ್ ಸಿಬಿ ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದ್ದು, ತವರಿನ ಅಭಿಮಾನಿಗಳ ಎದುರು ಕೊನೆಯ ಪಂದ್ಯದಲ್ಲಾದರೂ ಗೆಲ್ಲುತ್ತಾ ಎಂದು ಕಾದು ನೋಡಬೇಕಾಗಿದೆ.












Click it and Unblock the Notifications