RCB: ನಿಮಗೆ ಬುದ್ದಿ ಬರೋದು ಯಾವಾಗ? ಆರ್ಸಿಬಿ ವಿರುದ್ಧ ಅಭಿಮಾನಿಗಳ ಆಕ್ರೋಶ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆವೃತ್ತಿಯಲ್ಲಿ ಆರ್ಸಿಬಿ ತಂಡದ ಪ್ರದರ್ಶನ ನೋಡಿ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರ್ಸಿಬಿ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಸತತ ಆರು ವರ್ಷಗಳು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರ್ಸಿಬಿ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲುವು ಸಾಧಿಸಿದೆ. ಕೆಕೆಆರ್ ವಿರುದ್ಧ ಸೋತ ಬಳಿಕ ಅಭಿಮಾನಿಗಳು ತಂಡದ ಮ್ಯಾನೇಜ್‌ಮೆಂಟ್ ವಿರುದ್ಧವೇ ಸಿಟ್ಟಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳಿಗೆ ಕೋಪ ಯಾಕೆ?
16 ವರ್ಷಗಳಿಂದ ಆರ್ಸಿಬಿ ಕಪ್ ಗೆದ್ದಿಲ್ಲ, ಆದರೂ ತಂಡದ ಜನಪ್ರಿಯತೆ, ಅಭಿಮಾನಿಗಳಿಗೇನು ಕಡಿಮೆಯಿಲ್ಲ. ಅಭಿಮಾನಿಗಳು ಪ್ರತಿ ಬಾರಿ ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ನೀಡುತ್ತಿದ್ದರೂ, ತಂಡ ಮಾತ್ರ ಅದಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
6 ವರ್ಷಗಳಿಂದ ಕೆಕೆಆರ್ ವಿರುದ್ಧ ಸೋಲುತ್ತಿದ್ದರೂ ಅವರ ವಿರುದ್ಧ ಚಿನ್ನಸ್ವಾಮಿಯಲ್ಲಿ ಗೆಲ್ಲಲು ಯೋಜನೆ ರೂಪಿಸದೇ ಇರುವುದಕ್ಕೆ ತಂಡದ ಮ್ಯಾನೇಜ್‌ಮೆಂಟ್, ಕೋಚ್ ಸಿಬ್ಬಂದಿ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಲಿಷ್ಠ ಬ್ಯಾಟಿಂಗ್ ಪಡೆ
ಆರ್ಸಿಬಿ ತಂಡದಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆಯೇ ಇದೆ. ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ಮಹಿಪಾಲ್ ಲೋಮ್ರೋರ್, ದಿನೇಶ್ ಕಾರ್ತಿಕ್ ತಂಡದ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಆದರೆ ಇದುವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವಿಫಲವಾಗಿದೆ.
ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಅನುಜ್ ರಾವತ್ ಮಾತ್ರ ಉತ್ತಮ ಪ್ರದರ್ಶನ ನೀಡಿದ್ದಾರೆ. ಗ್ರೀನ್, ಪಟಿದಾರ್, ಮ್ಯಾಕ್ಸ್‌ವೆಲ್, ಡುಪ್ಲೆಸಿಸ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವುದು ತಂಡದ ಮೇಲೆ ಪರಿಣಾಮ ಬೀರಿದೆ.
ಮೊದಲ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಸೋತ ಬಳಿಕ ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸಾಹಸ ಮಾಡಿ ಗೆದ್ದಿತ್ತು, ಕೆಕೆಆರ್ ವಿರುದ್ಧ ಬ್ಯಾಟಿಂಗ್ ಮತ್ತೆ ವಿಫಲವಾದ ಕಾರಣ, ಸೋಲನುಭವಿಸಿದೆ.
ಅಭಿಮಾನಿಗಳ ಬೇಡಿಕೆ ಏನು?
ಮೂರು ಪಂದ್ಯಗಳಲ್ಲಿ ಬೌಲಿಂಗ್ ವಿಭಾಗದಲ್ಲಿ ವಿಫಲವಾಗಿರುವ ಅಲ್ಜಾರಿ ಜೋಸೆಫ್‌ರನ್ನು ಆಡಿಸುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ಪಿಚ್‌ನಲ್ಲಿ ಲಾಕಿ ಫರ್ಗ್ಯುಸನ್ ಅಥವಾ ರೀಸ್ ಟೋಪ್ಲಿ ಅವರನ್ನಾದರೂ ಆಡಿಸಬೇಕಿತ್ತು ಎನ್ನುವುದು ವಾದವಾಗಿದೆ.
ಮತ್ತೆ ಹಲವರ ಪ್ರಕಾರ ವಿಲ್ ಜ್ಯಾಕ್ಸ್ ಅನ್ನು ಆಡಿಸಲಿ, ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಕಾಶ್ ದೀಪ್ ವೇಗಿಯಾಗಿ ತಂಡದಲ್ಲಿರಲಿ, ವೈಶಾಖ್, ಸಿರಾಜ್, ಗ್ರೀನ್ ಕೂಡ ತಂಡದಲ್ಲಿದ್ದರೆ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಮತೋಲನ ಸಾಧಿಸುತ್ತದೆ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರವಾಗಿದೆ.
ಎರಡು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ವೈಶಾಖ್ ಮೂರನೇ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರೂ ಅದ್ಭುತ ಬೌಲಿಂಗ್ ಮಾಡಿದ್ದರು, 4 ಓವರ್ ಗಳಲ್ಲಿ 23 ರನ್ ನೀಡಿ 1 ವಿಕೆಟ್ ಪಡೆದರು. ಅವರನ್ನು ಮುಂದಿನ ಪಂದ್ಯಗಳಲ್ಲಿ ಆಡಿಸಲಿ ಎಂದು ಫ್ಯಾನ್ಸ್ ಆಗ್ರಹಿಸಿದ್ದಾರೆ.












Click it and Unblock the Notifications