AB De Villiers: 28 ಬಾಲ್, 15 ಸಿಕ್ಸ್ 101 ರನ್; ಬ್ಯಾಟ್ ಹಿಡಿದು ಮತ್ತೆ ಅಬ್ಬರಿಸಿದ ಎಬಿ ಡಿ ವಿಲಿಯರ್ಸ್
ಎಬಿ ಡಿ ವಿಲಿಯರ್ಸ್ ಆರ್ ಸಿಬಿ ಅಭಿಮಾನಿಗಳಿಂದ ಆಪದ್ಭಾಂಧವ ಎಂದೇ ಕರೆಸಿಕೊಳ್ಳುವ ಕ್ರಿಕೆಟಿಗ. ದಕ್ಷಿಣ ಆಫ್ರಿಕಾ ಆಟಗಾರನಾದರೂ ಬೆಂಗಳೂರಿನಲ್ಲಿ ಎಬಿ ಡಿವಿಲಿಯರ್ಸ್ ಕಣಕ್ಕಿಳಿದರೆ ಇಡೀ ಕ್ರೀಡಾಂಗಣ ಎಬಿಡಿ ಎಬಿಡಿ ಎನ್ನುವ ಕೂಗು ಮಾರ್ದನಿಸುತ್ತಿತ್ತು. ಎಬಿ ಡಿವಿಲಿಯರ್ಸ್ ಮತ್ತು ಆರ್ ಸಿಬಿ ನಡುವಿನ ಬಾಂಧವ್ಯ ಎಂತಹದ್ದು ಎನ್ನುವುದು ಐಪಿಎಲ್ ನೋಡುವ ಎಲ್ಲರಿಗೂ ಗೊತ್ತಿದೆ. ಆದರೆ 2021ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿತ್ತು.
ಅಂದಿನಿಂದ ಇಂದಿನವರೆಗೂ ಪ್ರತಿ ಬಾರಿ ಐಪಿಎಲ್ ಆಡುವಾಗಲೂ ಒಮ್ಮೆಯಾದರೂ ಎಬಿಡಿ ಹೆಸರನ್ನು ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಾರೆ. ಎಬಿಡಿ ಮತ್ತೆ ಆರ್ ಸಿಬಿಗೆ ಆಡಲಿ ಎಂದು ಕಾಯುವ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಆದರೆ ಇದೀಗ ಅಭಿಮಾನಿಗಳಿಗೆ ಮತ್ತೊಮ್ಮೆ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ನೋಡುವ ಅವಕಾಶ ಸಿಕ್ಕಿದೆ.

ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನಲ್ಲಿ ಕಣಕ್ಕಿಳಿದ ಎಬಿ ಡಿವಿಲಿಯರ್ಸ್ ಅಬ್ಬರಿಸಿದ್ದಾರೆ. 28 ಎಸೆತಗಳಲ್ಲಿ 15 ಸಿಕ್ಸರ್ ಸಹಿತ ಅಜೇಯ 101 ರನ್ ಗಳಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸೆಂಚುರಿಯನ್‌ನಲ್ಲಿ ನಡೆದ ಟೇಸ್ಟ್ ಆಫ್ ಸೂಪರ್‌ಸ್ಪೋರ್ಟ್ ಪಾರ್ಕ್ ಪ್ರದರ್ಶನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ದಂತಕಥೆ ಎಬಿ ಡಿವಿಲಿಯರ್ಸ್ ಕೇವಲ 28 ಎಸೆತಗಳಲ್ಲಿ ಶತಕ ಬಾರಿಸಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಯಿತು.
ಟೈಟಾನ್ಸ್ ಲೆಜೆಂಡ್ಸ್ ಪರ ಆಡುತ್ತಿದ್ದ ಎಬಿ ಡಿವಿಲಿಯರ್ಸ್, ಶತಕ ಪೂರೈಸಿದ ತಕ್ಷಣ ರಿಟೈರ್ಡ್ ಹರ್ಟ್ ಆದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೈಟಾನ್ಸ್ ಲೆಜೆಂಡ್ಸ್ 20 ಓವರ್‌ಗಳಲ್ಲಿ 269 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿರು. ಇದಕ್ಕೆ ಉತ್ತರವಾಗಿ, ಬುಲ್ ಲೆಜೆಂಡ್ಸ್ 14 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 125 ರನ್ ಗಳಿಸಿದ್ದಾ ಮಳೆಯಿಂದ ಪಂದ್ಯವನ್ನು ನಿಲ್ಲಿಸಲಾಯಿತು.
ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ ಎಬಿಡಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಕಳೆದ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅವರ ಆಟವನ್ನು ಶ್ಲಾಘಿಸಿದರು. ಕೊಹ್ಲಿ ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರಬಂದಿದ್ದನ್ನು ಮೆಚ್ಚಿಕೊಂಡ ಅವರು, ಆರ್ ಸಿಬಿ ತಂಡಕ್ಕಾಗಿ ವಿರಾಟ್ ಕೊಹ್ಲಿ ಕಪ್ ಗೆಲ್ಲಬೇಕು ಎಂದು ಹೇಳಿದ್ದಾರೆ.
ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಆರ್‌ಸಿಬಿ ಉದ್ಘಾಟನಾ ಪಂದ್ಯದಲ್ಲಿ ಆಡಲಿದೆ. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟಿರುವ ಆರ್ ಸಿಬಿ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.
ಜಿಯೋಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ಎಬಿ ಡಿವಿಲಿಯರ್ಸ್, ಸ್ಪರ್ಧೆಯ ಆರಂಭಿಕ ಹಂತಗಳಲ್ಲಿ ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಬಂದ ಟೀಕೆಗಳನ್ನು ನೆನಪಿಸಿಕೊಂಡರು, ಅದನ್ನು ಹಾಸ್ಯಾಸ್ಪದ ಎಂದು ಕರೆದಿದ್ದಾರೆ. ಆತ ತಂಡಕ್ಕೆ ಏನು ಬೇಕು ಅದನ್ನು ಮಾಡುತ್ತಾನೆ, ಇನ್ನೊಂದು ಬದಿಯಲ್ಲಿ ಆಡುವವರಿಗೆ ಆತ ಇದ್ದರೆ ಧೈರ್ಯ ಬರುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications