Ranji Trophy: ಮನೀಶ್, ಶರತ್, ವೈಶಾಖ್ ಶತಕ: ಬೃಹತ್ ಮುನ್ನಡೆ ಪಡೆದ ಕರ್ನಾಟಕ
ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಚಂಡೀಗಢ ವಿರುದ್ಧ ಮೇಲುಗೈ ಸಾಧಿಸಿದೆ. ಚಂಡೀಗಢ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 267 ರನ್‌ಗಳಿಗೆ ಆಲೌಟ್ ಮಾಡಿದ ಕರ್ನಾಟಕ ನಂತರ ಮೊದಲ ಇನ್ನಿಂಗ್ಸ್‌ನಲ್ಲಿ 563 ರನ್‌ಗಳ ಬೃಹತ್ ಮೊತ್ತ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಮನೀಶ್ ಪಾಂಡೆ, ಶರತ್ ಶ್ರೀನಿವಾಸ್ ಮತ್ತು ವಿಜಯ್ ಕುಮಾರ್ ವೈಶಾಖ್ ಅಮೋಘ ಶತಕ ಸಿಡಿಸುವ ಮೂಲಕ ಕರ್ನಾಟಕ ತಂಡ ಬೃಹತ್ ಮೊತ್ತ ಗಳಿಸಲು ನೆರವಾದರು.

ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 268 ರನ್ ಗಳಿಸಿ ಒಂದು ರನ್ ಮುನ್ನಡೆ ಪಡೆದುಕೊಂಡಿದ್ದ ಕರ್ನಾಟಕ ಮೂರನೇ ದಿನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮಯಾಂಕ್ ಅಗರ್ವಾಲ್ 57 ರನ್ ಗಳಿಸಿ ಔಟಾದ ಬಳಿಕ, ಮನೀಶ್ ಪಾಂಡೆ ಮತ್ತು ಹಾರ್ದಿಕ್ ರಾಜ್ ಉತ್ತಮ ಜೊತೆಯಾಟ ಆಡಿದರು.
ಹಾರ್ದಿಕ್ ರಾಜ್ 82 ರನ್ ಗಳಿಸಿದರೆ, ಮನೀಶ್ ಪಾಂಡೆ 181 ಎಸೆತಗಳಲ್ಲಿ 17 ಬೌಂಡರಿ 3 ಸಿಕ್ಸರ್ ಸಹಿತ 148 ರನ್ ಗಳಿಸಿದರು. ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಅಜೇಯ 100 ರನ್ ಗಳಿಸಿದರೆ, ಬೌಲರ್ ವೈಶಾಖ್ ವಿಜಯ್ ಕುಮಾರ್ ಅಜೇಯ 103 ರನ್ ಗಳಿಸುವ ಮೂಲಕ ಗಮನ ಸೆಳೆದರು. ಕರ್ನಾಟಕ 5 ವಿಕೆಟ್ ಕಳೆದುಕೊಂಡು 563 ರನ್ ಗಳಿಸಿದ್ದಾಗ, 296 ರನ್‌ಗಳ ಮುನ್ನಡೆಯೊಂದಿಗೆ ಡಿಕ್ಲೇರ್ ಮಾಡಿಕೊಂಡಿತು.
ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ
ಬಳಿಕ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಚಂಡೀಗಢ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳಲದೆ 61 ರನ್ ಗಳಿಸಿದೆ. ಚಂಡೀಗಢ ಇನ್ನೂ 235 ರನ್‌ಗಳ ಹಿನ್ನಡೆ ಹೊಂದಿದ್ದು, ನಾಲ್ಕನೇ ದಿನ ಎಚ್ಚರಿಕೆಯಿಂದ ಆಡಬೇಕಿದೆ.
ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿರುವ ಕರ್ನಾಟಕ ನಾಲ್ಕನೇ ದಿನ ಚಂಡೀಗಢ ತಂಡವನ್ನು ಬೇಗನೆ ಆಲೌಟ್ ಮಾಡುವ ಮೂಲಕ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ. ಈ ಪಂದ್ಯವನ್ನು ಡ್ರಾ ಮಾಡಿಕೊಂಡರೂ, ಕರ್ನಾಟಕ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿರುವ ಕಾರಣ, ಸಿ ಗುಂಪಿನ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆಯಲಿದ್ದು, ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ.
ಬೌಲರ್ ಆಗಿದ್ದ ವಿಜಯ್ ಕುಮಾರ್ ವೈಶಾಖ್ ಈ ರಣಜಿ ಪಂದ್ಯಾವಳಿಯಲ್ಲಿ ಆಲ್‌ರೌಂಡರ್ ಆಗಿ ಬದಲಾಗಿದ್ದಾರೆ. ಈಗಾಗಲೇ ತಮ್ಮ ಬ್ಯಾಟಿಂಗ್ ಮೂಲಕ ರಾಜ್ಯಕ್ಕೆ ನೆರವಾಗಿರುವ ಅವರು, ಚಂಡೀಗಢ ವಿರುದ್ಧ ಶತಕ ಸಿಡಿಸಿ ಮಿಂಚಿದ್ದಾರೆ.












Click it and Unblock the Notifications