ವೈಭವ್ ಸೂರ್ಯವಂಶಿ ನೀರಿನಿಂದ ಹೊರಬಿದ್ದ ಮೀನಿನಂತಿದ್ದ: ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಆರ್ ಅಶ್ವಿನ್ ಮಹತ್ವದ ಸಲಹೆ
R.Ashwin: ನ್ಯೂಜಿಲೆಂಡ್ ವಿರುದ್ಧದ ಎಡರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿದ್ದರೂ ಸಹ ವೈಭವ್ ಸೂರ್ಯವಂಶಿ ಅವರ ಪ್ರದರ್ಶನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ. ಇದೀಗ ಈ ಬಗ್ಗೆ ಭಾರತದ ಮಾಜಿ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್ ಅವರು ಪ್ರತಿಕ್ರಿಯಿಸಿದ್ದು, ಮ್ಯಾನೇಜ್‌ಮೆಂಟ್‌ಗೆ ಮಹತ್ವದ ಸಲಹೆ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಗಾಯಗೊಂಡಿದ್ದ ಇಶಾನ್ ಕಿಶನ್ ಅವರ ಬದಲಿಗೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಲಾಗಿತ್ತು. ಆದರೆ ತಮ್ಮ ಓಪನಿಂಗ್ ಸ್ಥಾನದ ಬದಲಾಗಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೈಭವ್, 8 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಯುವ ಆಟಗಾರನ ಈ ಪ್ರದರ್ಶನದ ಕುರಿತು ಭಾರತದ ಮಾಜಿ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್ ಮಾತನಾಡಿದ್ದು, ತಂಡದ ಮ್ಯಾನೇಜ್‌ಮೆಂಟ್‌ಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.

'ನೀರಿನಿಂದ ಹೊರಬಿದ್ದ ಮೀನಿನಂತಿದ್ದ ವೈಭವ್'
ವೈಭವ್ ಸೂರ್ಯವಂಶಿ ಪ್ರದರ್ಶನವನ್ನು ಪಂದ್ಯದ 'ಮಿಸ್' ಎಂದು ಕರೆದಿರುವ ಅಶ್ವಿನ್, 'ಅಪರಿಚಿತ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಯುವ ಆಟಗಾರ ನೀರಿನಿಂದ ಹೊರಬಿದ್ದ ಮೀನಿನಂತೆ ತತ್ತರಿಸಿದರು. 6ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ವೈಭವ್ ರನ್ ಕಲೆಹಾಕಲು ಪರದಾಡಿದರು. ಈ ವೇಳೆ ಕ್ರೀಸ್‌ನಲ್ಲಿದ್ದ ಹಿರಿಯ ಆಟಗಾರ ಸೂರ್ಯವಂಶಿಗೆ ಹತ್ತಿರ ಹೋಗಿ ಸಮಾಧಾನಪಡಿಸಿ ಸ್ವಲ್ಪ ತಾಳ್ಮೆಯಿಂದಿರು, ದೇಹಕ್ಕೆ ಹತ್ತಿರವಾಗಿ ಚೆಂಡನ್ನು ನೋಡಿ ಆಡು ಎಂದು ಮಾರ್ಗದರ್ಶನ ನೀಡಬೇಕಿತ್ತು,' ಅಂತಾ ಆರ್.ಅಶ್ವಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮ್ಯಾನೇಜ್‌ಮೆಂಟ್‌ಗೆ ಅಶ್ವಿನ್ ಮಗತ್ವದ ಸಲಹೆ
'3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ವೈಭವ್ ಸೂರ್ಯವಂಶಿಯ ನೈಜ ಆಟಕ್ಕೆ ಹೊಂದುವುದಿಲ್ಲ. ಗೌತಮ್ ಗಂಭೀರ್ ನೇತೃತ್ವದ ಕೋಚಿಂಗ್ ಬಳಗವು ವಂಡರ್ ಕಿಡ್, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಮೂವರನ್ನೂ ಒಂದೇ ತಂಡದಲ್ಲಿ ಆಡಿಸಲು ಬಯಸಿದರೆ, ಸಂಜು ಅವರನ್ನೇ 3ನೇ ಕ್ರಮಾಂಕಕ್ಕೆ ಇಳಿಸುವುದು ಸೂಕ್ತ. ಹಿಂದೆ ಏಷ್ಯನ್ ಗೇಮ್ಸ್‌ನಲ್ಲೂ ಸ್ಯಾಮ್ಸನ್ ಈ ಕ್ರಮಾಂಕದಲ್ಲಿ ಆಡಿದ್ದ ಅನುಭವ ಹೊಂದಿದ್ದಾರೆ. 15 ವರ್ಷ ಯುವ ಆಟಗಾರ ವೈಭವ್‌ಗೆ ಅವರ ಆರಂಭಿಕ ಕ್ರಮಾಂಕವನ್ನೇ ನೀಡುವುದು ಉತ್ತಮ,' ಎಂದು ಆರ್.ಅಶ್ವಿನ್ ತಿಳಿಸಿದ್ದಾರೆ.
ಭಾರತದ ಮಿಡಲ್ ಆರ್ಡರ್ ಬಗ್ಗೆ ಪ್ರಶಂಸೆ
ಇದೇ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 181 ರನ್‌ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ನೀಡಿದ ಪ್ರದರ್ಶನವನ್ನು ಅಶ್ವಿನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ ತೋರಿದ ಅದ್ಭುತ ಆಟ ತಂಡದ ಆಕ್ರಮಣಕಾರಿ ಗುಣವನ್ನು ಎತ್ತಿ ತೋರಿಸುತ್ತದೆ,' ಎಂದ ಹೇಳಿದ್ದಾರೆ.
'ಮಿಚೆಲ್ ಸ್ಯಾಂಟ್ನರ್ ಅವರಂತಹ ಸ್ಪಿನ್ನರ್ ವಿರುದ್ಧ ರಮಣ್‌ದೀಪ್ ಸಿಂಗ್ ಸಿಕ್ಸರ್ ಬಾರಿಸಿದ ಶೈಲಿ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. 6, 7 ಮತ್ತು 8ನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾ ಹೊಂದಿರುವ ಆಟಗಾರರ ಬಳಗ ಎದುರಾಳಿ ತಂಡಗಳಿಗೆ ತೀವ್ರ ಭೀತಿ ಹುಟ್ಟಿಸುವಂತಿದೆ,' ಎಂದು ರವಿಚಂದ್ರನ್ ಅಶ್ವಿನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಆರ್.ಅಶ್ವಿನ್ ಅವರು ವೈಭವ್ ಸೂರ್ಯವಂಶಿ ಪ್ರದರ್ಶನದ ಬಗ್ಗೆ ಮಾತನಾಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಅದೇನೇ ಇರಲಿ ವೈಭವ್ ಸೂರ್ಯವಂಶಿ ಅವರು ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ್ದು, ಮುಂದಿನ ಅಂದರೆ ಮಂಗಳವಾರ ನಡೆಯುವ ಪಂದ್ಯದಲ್ಲಾದರೂ ಆಕ್ರಮಣಕಾರಿ ಬ್ಯಾಟಿಂಗ್ ಆಡಲಿದ್ದಾರಾ ಎಂದು ಕಾದುನೋಡಬೇಕಿದೆ. ಅವರ ಆಟಕ್ಕಾಗಿಯೇ ಅಭಿಮಾನಿಗಳು ಕಾತರದಿಂದ ಕಾದಿರುವುದು ನಿಜ..


Click it and Unblock the Notifications
