CSK: ರುತುರಾಜ್ ಗಾಯಕ್ವಾಡ್ ಸ್ಥಾನಕ್ಕೆ ಸ್ಫೋಟಕ ಬ್ಯಾಟರ್ ಎಂಟ್ರಿ?
ಐಪಿಎಲ್ 2025ರ ಆವೃತ್ತಿಯಿಂದ ಸಿಎಸ್‌ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಹೊರಬಿದ್ದಿದ್ದಾರೆ. ಎಂಎಸ್ ಧೋನಿ ಇದೀಗ ಮತ್ತೊಮ್ಮೆ ಉಳಿದ ಪಂದ್ಯಗಳಿಗೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಮೊಣಕೈ ಗಾಯಕ್ಕೆ ತುತ್ತಾಗಿರುವ ರುತುರಾಜ್ ಗಾಯಕ್ವಾಡ್ ಇದೀಗ ಪಂದ್ಯಾವಳಿಯಿಂದಲೇ ಹೊರಬಿದಿದ್ದು ಸಿಎಸ್‌ಕೆ ತಂಡ ಬದಲೀ ಆಟಗಾರನ ಹೆಸರು ಘೋಷಣೆ ಮಾಡಬೇಕಿದೆ.
ಮಾಹಿತಿ ಪ್ರಕಾರ ರುತುರಾಜ್ ಗಾಯಕ್ವಾಡ್ ಸ್ಥಾನಕ್ಕೆ ಸ್ಫೋಟಕ ಬ್ಯಾಟರ್ ಎಂಟ್ರಿಯಾಗುವ ಸಾಧ್ಯತೆ ಇದೆ. ಮುಂಬೈನ ಆಟಗಾರ ಪೃಥ್ವಿ ಶಾ ಅವರು ಸಿಎಸ್‌ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಪೃಥ್ವಿ ಶಾ ಹೆಸರು ಟ್ರೆಂಡಿಂಗ್ ಆಗಿದೆ.

ಪೃಥ್ವಿ ಶಾ ಸ್ಫೋಟಕ ಆರಂಭಿಕ ಬ್ಯಾಟರ್. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಆಡಿದ ಅನುಭವ ಹೊಂದಿದ್ದಾರೆ. ಭಾರತ ತಂಡಕ್ಕೂ ಆಡಿರುವ ಅವರು ಬಳಿಕ ಅಶಿಸ್ತಿನ ಕಾರಣದಿಂದ ಭಾರತ ತಂಡದಲ್ಲಿ ಅವಕಾಶ ಕಳೆದುಕೊಂಡರು. ಅದಾದ ಬಳಿಕ ದೇಶೀಯ ಕ್ರಿಕೆಟ್‌ನಲ್ಲಿ, ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅವರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಯಾವ ತಂಡಗಳೂ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಇದರಿಂದ ಬೇಸರಗೊಂಡಿದ್ದ ಪೃಥ್ವಿ ಶಾಗೆ ಅದೃಷ್ಟ ಕೈಹಿಡಿಯುವ ಸಾಧ್ಯತೆ ಇದೆ.
ಪೃಥ್ವಿ ಶಾ ಭಾರತಕ್ಕೆ 6 ಪಂದ್ಯಗಳನ್ನು ಆಡಿದ್ದು 31.50 ಸರಾಸರಿಯಲ್ಲಿ 189 ರನ್ ಗಳಿಸಿದ್ದಾರೆ. 117 ಟಿ20 ಪಂದ್ಯಗಳನ್ನು ಆಡಿದ್ದು 25.01 ಸರಾಸರಿಯಲ್ಲಿ 2902 ರನ್ ಗಳಿಸಿದ್ದಾರೆ. 151.54 ಸ್ಟ್ರೈಕ್‌ರೇಟ್ ಹೊಂದಿದ್ದು ಸ್ಫೋಟಕ ಆರಂಭ ಒದಗಿಸುವ ಸಾಮರ್ಥ್ಯ ಹೊಂದಿದ್ದಾರೆ. ಎಂಎಸ್ ಧೋನಿ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಪೃಥ್ವಿ ಶಾ ತಂಡಕ್ಕೆ ಸೇರಿಕೊಂಡರೆ ಆರಂಭಿಕ ಜೋಡಿ ಬದಲಾಗಬಹುದು. ಡಿವೋನ್ ಕಾನ್ವೆ ಜೊತೆ ಪೃಥ್ವಿ ಶಾ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದ್ದು, ರಚಿನ್ ರವೀಂದ್ರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಬಹುದು.
ಶುಕ್ರವಾರ ಸಿಎಸ್‌ಕೆ ಕೆಕೆಆರ್ ಹಣಾಹಣಿ
ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಆಗಿರುವ ಕೆಕೆಆರ್ ಬಲಿಷ್ಠ ತಂಡವಾಗಿದ್ದು ಸಿಎಸ್‌ಕೆ ತಂಡಕ್ಕೆ ತವರಿನಲ್ಲಿ ಮತ್ತೊಂದು ಕಠಿಣ ಸವಾಲು ಹಾಕಲು ಸಜ್ಜಾಗಿದೆ.












Click it and Unblock the Notifications