India vs Pakistan: ಪಾಕಿಸ್ತಾನದ ವಿರುದ್ಧ ಸೋತ ಭಾರತ ಚಾಂಪಿಯನ್‌ಗಳು
ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ಲೆಜೆಂಡ್ಸ್ ಚಾಂಪಿಯನ್ಸ್ 2024ರ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಭಾರತದ ವಿರುದ್ಧ 68 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಬರ್ಮಿಂಗ್‌ಹ್ಯಾಂನ ಎಡ್ಜ್‌ಬ್ಯಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಚಾಂಪಿಯನ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 243 ರನ್ ಗಳಿಸಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 175 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ಸುರೇಶ್ ರೈನಾ 52 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾದರು.
ಚಾಂಪಿಯನ್‌ಗಳ ಆಟ
ಭಾರತ ತಂಡದಲ್ಲಿ ಆಡಿ ನಿವೃತ್ತಿ ಪಡೆದಿರುವ ಪ್ರಮುಖ ಆಟಗಾರರು ಭಾರತ ಚಾಂಪಿಯನ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಯುವರಾಜ್ ಸಿಂಗ್, ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್ ತಂಡದಲ್ಲಿರುವ ಪ್ರಮುಖ ಆಟಗಾರರಾಗಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಯುವಿ ಕಣಕ್ಕಿಳಿಯದೇ ಇರುವುದು ತಂಡಕ್ಕೆ ಹಿನ್ನಡೆಯಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಚಾಂಪಿಯನ್ಸ್ ಕಮ್ರಾನ್ ಅಕ್ಮಲ್ 77 ರನ್, ಶಾರ್ಜಿಲ್ ಖಾನ್ 72 ರನ್ ಮತ್ತು ಶೋಯಬ್ ಮಕ್ಸೂದ್ 51 ರನ್‌ಗಳ ನೆರವಿನಿಂದ 243 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ರಾಬಿನ್ ಉತ್ತಪ್ಪ 22 ರನ್, ಅಂಬಾಟಿ ರಾಯುಡು 39 ರನ್, ಸುರೇಶ್ ರೈನಾ 52 ರನ್ ಗಳಿಸಿದರೆ ಉಳಿದ ಬ್ಯಾಟರ್ ಗಳು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಶೋಯಬ್ ಮಲಿಕ್ ಮತ್ತು ವಹಾಬ್ ರಿಯಾಜ್ ತಲಾ 3 ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನದ ಗೆಲುವನ್ನು ಸುಲಭವಾಗಿಸಿದರು.
6 ತಂಡಗಳು ಸೆಣೆಸಾಟ
ವಿಶ್ವ ಲೆಜೆಂಡ್ಸ್ ಚಾಂಪಿಯನ್ಸ್ 2024 ಪಂದ್ಯಾವಳಿಯಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣೆಸುತ್ತಿವೆ. ಹಿರಿಯ ಆಟಗಾರರು ಮತ್ತೆ ಮೈದಾನಕ್ಕಿಳಿದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಮುಗಿಬಿದ್ದಿದ್ದರು. ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದು ವಿಶೇಷವಾಗಿತ್ತು.












Click it and Unblock the Notifications