India vs Pakistan: ಉಗ್ರರ ದಾಳಿ; ಬಿಸಿಸಿಐಗೆ ವಿಶೇಷ ಮನವಿ ಮಾಡಿದ ಸೌರವ್ ಗಂಗೂಲಿ
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ವಿರುದ್ಧ ಭಾರತೀಯರ ಆಕ್ರೋಶ ತೀವ್ರವಾಗಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವಂತೆ ಕೇಂದ್ರ ಸರ್ಕಾರಕ್ಕೆ ಜನ ಆಗ್ರಹಿಸುತ್ತಿದ್ದಾರೆ. ಈ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಮಹತ್ವದ ಸಲಹೆ ಕೊಟ್ಟಿದ್ದಾರೆ.
ಭಾರತವು ಪಾಕಿಸ್ತಾನದ ಜೊತೆ ಕ್ರಿಕೆಟ್ ಸಂಬಂಧವನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕೆಂದು ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಕರೆ ನೀಡಿದ್ದಾರೆ. ಪದೇ ಪದೇ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿರುವುದರಿಂದ ಭಾರತವು ದ್ವಿಪಕ್ಷೀಯ ಅಥವಾ ಯಾವುದೇ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದೊಂದಿಗೆ ಆಡಬಾರದು ಎಂದು ಗಂಗೂಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.\

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿಯು ದೇಶವನ್ನು ಬೆಚ್ಚಿಬೀಳಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಪ್ರಸಾರಕರು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) 2025 ಪಂದ್ಯಗಳನ್ನು ಪ್ರದರ್ಶಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಭಾರತವು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದನ್ನು ಮುಂದುವರಿಸಬೇಕೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಪಾಕಿಸ್ತಾನದ ಸಹವಾಸವೇ ಬೇಡ
ಭಾರತ ಯಾವುದೇ ಕಾರಣಕ್ಕೂ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ಆಡಬಾರದು. ಪ್ರತಿ ವರ್ಷ ಇಂತಹ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಲೇ ಇವೆ. ಇದು ಅವರಿಗೆ ತಮಾಷೆಯಾಗಿದೆ. ಭಯೋತ್ಪಾದನೆಯನ್ನು ಇನ್ನೂ ಸಹಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
2012-13 ರಿಂದ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ, ಐಸಿಸಿ ಮತ್ತು ಎಸಿಸಿ ಪಂದ್ಯಾವಳಿಯಲ್ಲಿ ಮಾತ್ರ ಭಾರತ ಪಾಕಿಸ್ತಾನ ಪಂದ್ಯಗಳು ನಡೆಯುತ್ತಿವೆ. ಭಾರತ ಸರ್ಕಾರದ ನಿಲುವಿಗೆ ಅನುಗುಣವಾಗಿ ಬಿಸಿಸಿಐ ಈ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿದೆ. ರಾಜಕೀಯ ಸಂಬಂಧಗಳು ಸುಧಾರಿಸದ ಹೊರತು ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆಯುವುದಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.
ಭಾರತವು 2025 ರ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತು, ಬದಲಿಗೆ ದುಬೈನ ತಟಸ್ಥ ಸ್ಥಳದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡಿತು. ಇದು ಪಾಕಿಸ್ತಾನದ ಕೋಪಕ್ಕೆ ಕಾರಣವಾಗಿದ್ದು ಮುಂಬರುವ ಐಸಿಸಿ ಪಂದ್ಯಾವಳಿಗೆ ತಾನು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದೆ.
ಭಾರತದ ವಿರುದ್ಧದ ಪಂದ್ಯ ಆಡದಿದ್ದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಪಾರ ನಷ್ಟ ಅನುಭವಿಸಲಿದೆ. ಐಸಿಸಿ ಪಂದ್ಯಾವಳಿಯಲ್ಲೂ ಭಾರತ ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿದರೆ, ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ.












Click it and Unblock the Notifications