ಕೊಲೆ ಪ್ರಕರಣ: ಜಾಮೀನು ಅರ್ಜಿ ಸಲ್ಲಿಸಿದ ಕುಸ್ತಿಪಟು ಸುಶೀಲ್ ಕುಮಾರ್
ನವದೆಹಲಿ, ಅಕ್ಟೋಬರ್ 5: ಛತ್ರಸಾಲ್ ಕ್ರೀಡಾಂಗಣದಲ್ಲಿ ಯುವ ಕುಸ್ತಿಪಟು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯಕ್ಕೆ ಜಾಮೀನು ಕೋರಿ ಕುಸ್ತಿಪಟು ಸುಶೀಲ್ ಕುಮಾರ್ ಮನವಿ ಸಲ್ಲಿಸಿದ್ದಾರೆ.
ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಒಲಿಂಪಿಕ್ಸ್ ಕುಸ್ತಿಪಟು ಸುಶೀಲ್ ಕುಮಾರ್ ಸೋಮವಾರದಂದು ದೆಹಲಿ ನ್ಯಾಯಾಲಯದಲ್ಲಿ ಜಾಮೀನು ಕೋರಿ ಮನವಿ ಸಲ್ಲಿಸಿದ್ದು, ತಮ್ಮ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದಿದ್ದಾರೆ.
ವಕೀಲ ಪ್ರದೀಪ್ ರಾಣಾ ಮೂಲಕ ಸುಶೀಲ್ ಕುಮಾರ್ ಮನವಿ ಸಲ್ಲಿಸಿದ್ದು, ಜೂನ್ 2ರಿಂದಲೂ ನ್ಯಾಯಾಂಗ ಬಂಧನದಲ್ಲಿರುವುದಾಗಿ ಹೇಳಿದ್ದಾರೆ. "ಕುಸ್ತಿ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಸುಶೀಲ್ ಕುಮಾರ್ ಅವರು ದೇಶದಲ್ಲಿ ಕ್ರೀಡೆಯ ಮಟ್ಟವನ್ನು ಸುಧಾರಿಸಲು ಯುವ ಕುಸ್ತಿಪಟುಗಳನ್ನು ತಯಾರಿಸುವ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ. ಸುಶೀಲ್ ಕುಮಾರ್ ಅವರ ಪ್ರಯತ್ನವು ಫಲ ನೀಡಲು ಆರಂಭಿಸಿದ್ದು, ಕುಸ್ತಿ ಕ್ಷೇತ್ರದಲ್ಲಿ ಶಕ್ತಿ ಕೇಂದ್ರವಾಗುವ ನಿಟ್ಟಿನಲ್ಲಿ ಭಾರತ ದಾಪುಗಾಲಿಡುತ್ತಿದೆ. ಇದು ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಸಾಬೀತಾಗಿದ್ದು, ಯಾರೂ ನಿರೀಕ್ಷಿಸದ ಸಾಧನೆಯನ್ನು ಕುಸ್ತಿಪಟುಗಳು ಮಾಡಿದ್ದಾರೆ'' ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ದೆಹಲಿಯ ಮಾಡೆಲ್ ಟೌನ್ ಪ್ರದೇಶದ ಸುಶೀಲ್ ಕುಮಾರ್ ಅವರಿಗೆ ಸೇರಿದ ಫ್ಲ್ಯಾಟ್ ವಿಚಾರವಾಗಿ ಸುಶೀಲ್ ಕುಮಾರ್ ಮತ್ತು ಸಾಗರ್ ರಾಣಾ ನಡುವೆ ಭಿನ್ನಾಭಿಪ್ರಾಯವಿತ್ತು. ಮೇ 4ರಂದು ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಸಾಗರ್ ಧಂಕರ್ ಹತ್ಯೆ ನಡೆದಿತ್ತು. ಘಟನೆ ನಡೆದ ರಾತ್ರಿ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದರು.
ಈ ಘಟನೆಯ ನಂತರ ಸುಶೀಲ್ ಮೊದಲಿಗೆ ಹರಿದ್ವಾರಕ್ಕೆ ತೆರಳಿದ್ದು ನಂತರ ರಿಷಿಕೇಶಕ್ಕೆ ತೆರಳಿದ್ದರು. ಹರಿದ್ವಾರದಲ್ಲಿ ಅವರು ಆಶ್ರಮವೊಂದರಲ್ಲಿ ಉಳಿದುಕೊಂಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ನಂತರ ದೆಹಲಿಗೆ ಮರಳಿದ ಅವರು ಸತತವಾಗಿ ತಮ್ಮ ಸ್ಥಳವನ್ನು ಬದಲಾಯಿಸುತ್ತಿದ್ದಾರೆ ಎನ್ನಲಾಗಿತ್ತು.
ನಂತರ ಮೇ 23 ರ ಬೆಳಿಗ್ಗೆ ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ಸುಶೀಲ್ ಕುಮಾರ್ ಅವರನ್ನು ಬಂಧಿಸಲು ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು. ನಂತರ ದೆಹಲಿ ಪೊಲೀಸರು 10 ದಿನಗಳ ಕಾಲ ವಿಚಾರಣೆಯನ್ನು ನಡೆಸಿದ್ದರು. ಜೂನ್ 2ರಂದು ದೆಹಲಿ ಜಿಲ್ಲಾ ನ್ಯಾಯಾಲಯ ಸುಶೀಲ್ ಕುಮಾರ್‌ಗೆ 9 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿತ್ತು.

ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಅವರನ್ನು ಮಂಡೋಲಿ ಕಾರಾಗೃಹದಿಂದ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ.
ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸುಶೀಲ್ ತನಗೆ ವಿಶೇಷ ಆಹಾರ, ಸಪ್ಲಿಮೆಂಟ್ಸ್, ದೈಹಿಕ ಅಭ್ಯಾಸದ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸೌಲಭ್ಯಗಳನ್ನು ಕೊಡದಿದ್ದರೆ ಆರೋಗ್ಯ ಹಾಳಾಗಿ ತನ್ನ ವೃತ್ತಿ ಜೀವನಕ್ಕೆ ತೊಂದರೆಯಾಗಲಿದೆ ಎಂದಿದ್ದರು. ಆದರೆ ಸುಶೀಲ್ ಕೋರಿಕೆಯನ್ನು ಕೋರ್ಟ್ ನಿರಾಕರಿಸಿತ್ತು.
ಸುಶೀಲ್ ಕುಮಾರ್ ವಿರುದ್ಧ ಕೊಲೆ ಪ್ರಕರಣದ ತನಿಖೆ ನಡೆಯುತ್ತಿರುವ ಕಾರಣದಿಂದಾಗಿ ಅವರನ್ನು ರೈಲ್ವೆ ಇಲಾಖೆಯ ಹುದ್ದೆಯಿಂದ ಅಮಾನತುಗೊಳಿಸಿರುವುದಾಗಿ ಉತ್ತರ ರೈಲ್ವೆಯ ಸಿಪಿಆರ್‌ಒ ದೀಪಕ್ ಕುಮಾರ್ ಹೇಳಿದ್ದರು.
''ಕುಸ್ತಿಪಟು ಮುಂದೆ ಯಾವುದೇ ಕಸ್ಟಡಿ ವಿಚಾರಣೆಗೆ ಅಗತ್ಯವಿಲ್ಲ, ಯಾವುದೇ ಮರುಪಡೆಯುವಿಕೆ ಅಥವಾ ದೋಷಾರೋಪಣೆಯ ವಸ್ತುಗಳನ್ನು ಪತ್ತೆ ಮಾಡುವುದು ಕಡಿಮೆ ಎಂದು ಚಾರ್ಜ್ ಶೀಟ್ ಸಲ್ಲಿಸಿರುವುದು ಆತನ ವಿರುದ್ಧದ ತನಿಖೆ ಮುಗಿದಿದೆ ಎಂದು ತೋರಿಸುತ್ತದೆ'' ಎಂದು ಸುಶೀಲ್ ಪರ ವಕೀಲರು ವಾದಿಸಿದ್ದಾರೆ.
ಸುಶೀಲ್ ಕುಮಾರ್ ಅವರಿಂದ ಯಾವುದೇ ದೋಷಪೂರಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ, ಇದು ಆತನ ಮುಗ್ಧತೆಯನ್ನು ಮತ್ತಷ್ಟು ದೃಢಪಡಿಸುತ್ತದೆ ಆದರೆ ಆತನ ವಿರುದ್ಧ ಪ್ರಕರಣವನ್ನು ನಿರ್ಮಿಸಲು ತನಿಖಾ ಸಂಸ್ಥೆ ಕೆಲವು ವಾಹನಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಆರೋಪಿಸಿವೆ. ಇದೆಲ್ಲ ಸತ್ಯಕ್ಕೆ ದೂರವಾಗಿವೆ.
ಯಾವುದೇ ನ್ಯಾಯಾಲಯದ ಮುಂದೆ ಮುಗ್ಧತೆಯನ್ನು ಸಾಬೀತಾಗುವ ವಿಶ್ವಾಸವಿದೆ. ಈ ಹಂತದಲ್ಲಿ ತನ್ನನ್ನು ನಿರಪರಾಧಿ ಎಂದು ಪರಿಗಣಿಸುವುದಕ್ಕಾಗಿ ಪೂರ್ವ-ವಿಚಾರಣಾ ಬಂಧನವಾಗಿದೆ ಎಂದು ಸುಶೀಲ್ ಹೇಳಿದ್ದಾರೆ.
ದೆಹಲಿ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಕುಮಾರ್ ಹಾಗೂ ಇತರ 12 ಆರೋಪಿಗಳ ಹೆಸರಿದೆ. ಕೊಲೆ, ಕೊಲೆ ಯತ್ನ, ತಪ್ಪಿತಸ್ಥ ಹತ್ಯೆ, ಕ್ರಿಮಿನಲ್ ಪಿತೂರಿ, ಅಪಹರಣ, ದರೋಡೆ, ಗಲಭೆ ಮುಂತಾದ ಅಪರಾಧಗಳ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.












Click it and Unblock the Notifications