World Cup Points Table: ಮೊದಲ ಸ್ಥಾನಕ್ಕೇರಿದ ದಕ್ಷಿಣ ಆಫ್ರಿಕಾ: ಎರಡನೇ ಸ್ಥಾನದಲ್ಲಿ ಭಾರತ
2023ರ ಏಕದಿನ ವಿಶ್ವಕಪ್‌ನ ಅತ್ಯಂತ ರೋಚಕ ಪಂದ್ಯಕ್ಕೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಸಾಕ್ಷಿಯಾಗಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪಾಕಿಸ್ತಾನದ ವಿರುದ್ಧ 1 ವಿಕೆಟ್‌ಗಳ ರಣ ರೋಚಕ ಗೆಲುವು ಸಾಧಿಸಿದೆ.
ಕೊನೆಯ ಕ್ಷಣದವರೆಗೂ ಅಭಿಮಾನಿಗಳನ್ನು ಸೀಟಿನ ಅಂಚಿನಲ್ಲಿ ಕೂರಿಸಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿತು. 1999ರ ಆವೃತ್ತಿಯ ನಂತರ ದಕ್ಷಿಣ ಆಫ್ರಿಕಾ ಪಾಕಿಸ್ತಾನದ ವಿರುದ್ಧ ಐಸಿಸಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿರಲಿಲ್ಲ, ಈ ಬಾರಿ ಗೆಲ್ಲುವ ಮೂಲಕ ಆ ಸೋಲಿನ ಸರಪಳಿಯನ್ನು ಕಳಚಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 47.2 ಓವರ್ ಗಳಲ್ಲಿ 270 ರನ್ ಗಳಿಗೆ ಆಲೌಟ್ ಆಯಿತು. ತಬ್ರೈಜ್ ಶಂಸಿ 4 ವಿಕೆಟ್ ಪಡೆದು ಮಿಂಚಿದರೆ, ಮಾರ್ಕೋ ಯಾನ್ಸನ್ 3 ವಿಕೆಟ್ ಪಡೆದರು, ಪಾಕಿಸ್ತಾನ ಪರ ಬಾಬರ್ ಅಜಂ 50 ರನ್ ಗಳಿಸಿದರೆ, ಸೌದ್ ಶಕೀಲ್ 52, ಶದಾಬ್ ಖಾನ್ 42 ರನ್ ಗಳಿಸಿದರು.
ಈ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಗಳಿಸುವ ಮೂಲಕ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು, ಆದರೆ ಈ ಹಂತದಲ್ಲಿ ತಿರುಗಿಬಿದ್ದ ಪಾಕಿಸ್ತಾನ ವಿಕೆಟ್‌ಗಳನ್ನು ಪಡೆಯುವ ಮೂಲಕ ಗೆಲುವಿನ ಸನಿಹಕ್ಕೆ ಬಂದಿತು.
260 ರನ್‌ಗಳಾಗಿದ್ದಾಗ 9ನೇ ವಿಕೆಟ್ ಕಳೆದುಕೊಂಡಿತು, ಈ ಹಂತದಲ್ಲಿ ಎಚ್ಚರಿಕೆಯಿಂದ ಆಡಿದ ಕೇಶವ್ ಮಹರಾಜ್ ಮತ್ತು ತಬ್ರೈಜ್ ಶಂಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.
ಅಗ್ರಸ್ಥಾನಕ್ಕೇರಿದ ದಕ್ಷಿಣ ಆಫ್ರಿಕಾ
ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. 6 ಪಂದ್ಯಗಳಲ್ಲಿ 5 ಗೆಲುವು ಒಂದು ಸೋಲು ಕಂಡಿರುವ ಹರಿಣಗಳು ಉತ್ತಮ ರನ್ ರೇಟ್ ಹೊಂದಿದ್ದ ಕಾರಣ ಭಾರತವನ್ನು ಮೀರಿ ಮೊದಲ ಸ್ಥಾನವನ್ನು ಅಲಂಕರಿಸಿದೆ.
ಇನ್ನು ಭಾರತ ತಂಡ ಇದುವರೆಗೂ ಆಡಿರುವ ಐದೂ ಪಂದ್ಯಗಳನ್ನು ಗೆದ್ದಿದ್ದು 10 ಅಂಕಗಳನ್ನು ಹೊಂದಿದ್ದರೂ, ರನ್ ರೇಟ್ ಕಡಿಮೆ ಇರುವ ಕಾರಣ ಎರಡನೇ ಸ್ಥಾನದಲ್ಲಿದೆ. ಇನ್ನು 8 ಪಾಯಿಂಟ್‌ಗಳನ್ನು ಹೊಂದಿರುವ ನ್ಯೂಜಿಲೆಂಡ್ 3ನೇ ಸ್ಥಾನದಲ್ಲಿದೆ, 6 ಪಾಯಿಂಟ್‌ಗಳೊಂದಿಗೆ ಆಸ್ಟ್ರೇಲಿಯಾ 4ನೇ ಸ್ಥಾನದಲ್ಲಿದೆ.
ಶ್ರೀಲಂಕಾ ತಂಡ 5ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 6ನೇ ಸ್ಥಾನದಲ್ಲಿದೆ, ಅಫ್ಘಾನಿಸ್ತಾನ 7, ಬಾಂಗ್ಲಾದೇಶ 8, ಇಂಗ್ಲೆಂಡ್ 9 ಮತ್ತು ನೆದರ್ಲ್ಯಾಂಡ್ಸ್ ತಂಡ 10ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಸೆಮಿಫೈನಲ್ ಆಸೆ ಬಹುತೇಕ ಕೊನೆಯಾಗಿದ್ದು, ಭಾರತದ ವಿರುದ್ಧ ಸೋತರೆ ಅಧಿಕೃತವಾಗಿ ಸೆಮಿಫೈನಲ್ ರೇಸ್‌ನಿಂದ ಹೊರಬೀಳಲಿದೆ.












Click it and Unblock the Notifications