ODI World Cup: ಪ್ರಶಸ್ತಿ ಗೆಲ್ಲಲು ಇನ್ನೂ ಮೂರು ವಿಶ್ವಕಪ್ ಕಾಯಬೇಕು: ಭಾರತ ತಂಡಕ್ಕೆ ಮಾಜಿ ಕೋಚ್ ಎಚ್ಚರಿಕೆ
ಏಕದಿನ ವಿಶ್ವಕಪ್‌ನಲ್ಲಿ ಅಜೇಯವಾಗಿರುವ ಭಾರತ ತಂಡ ಕೊನೆಯ ಲೀಗ್ ಪಂದ್ಯದಲ್ಲಿ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಗೆದ್ದು, ಅಜೇಯವಾಗಿ ಸೆಮಿಫೈನಲ್ ಆಡುವ ವಿಶ್ವಾಸದಲ್ಲಿದೆ ಭಾರತ.
ಈ ನಡುವೆಯೇ ಭಾರತ ತಂಡಕ್ಕೆ ಮಾಜಿ ಕೋಚ್ ರವಿಶಾಸ್ತ್ರಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈ ಆವೃತ್ತಿಯಲ್ಲಿ ಭಾರತ ಏನಾದರೂ ಪ್ರಶಸ್ತಿ ಗೆಲ್ಲಲು ವಿಫಲವಾದರೆ, ಮತ್ತೊಂದು ವಿಶ್ವಕಪ್ ಗೆಲ್ಲಲು ಇನ್ನೂ ಮೂರು ಆವೃತ್ತಿಗಳನ್ನು ಕಾಯಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕ್ಲಬ್ ಪ್ರೈರೀ ಫೈರ್ ಪಾಡ್‌ಕ್ಯಾಸ್ಟ್‌ನೊಂದಿಗೆ ಮಾತನಾಡಿದ ರವಿ ಶಾಸ್ತ್ರಿ, ಭಾರತ ತಂಡದ ಎಲ್ಲಾ ಆಟಗಾರರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ, ಭಾರತ ತಂಡದ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಲು ಇದು ಅತ್ಯುತ್ತಮ ಅವಕಾಶವಾಗಿದೆ ಎಂದು ಹೇಳಿದರು.
ಈ ಬಾರಿ ಪ್ರಶಸ್ತಿ ಗೆಲ್ಲದಿದ್ದರೆ!
ಆಡಮ್ ಗಿಲ್‌ಕ್ರಿಸ್ಟ್ ಮತ್ತು ಮೈಕೆಲ್ ವಾಘನ್ ಕೂಡ ಪಾಡ್‌ಕ್ಯಾಸ್ಟ್‌ನ ಭಾಗವಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಾಸ್ತ್ರಿ, "ತಂಡದ ಆಟವನ್ನು ನೋಡಿ ಇಡೀ ದೇಶವೇ ಹುಚ್ಚೆದ್ದು ಕುಣಿಯುತ್ತಿದೆ, 12 ವರ್ಷಗಳ ಹಿಂದೆ ಭಾರತ ಕೊನೆಯ ಬಾರಿ ಏಕದಿನ ವಿಶ್ವಕಪ್ ಗೆದ್ದಿತ್ತು, ಈಗ ಮತ್ತೆ ಅದನ್ನೇ ಮಾಡಲು ತಂಡಕ್ಕೆ ಉತ್ತಮ ಅವಕಾಶ ಸಿಕ್ಕಿದೆ. ಭಾರತ ತಂಡ ಅತ್ಯುತ್ತಮವಾಗಿ ಆಡುತ್ತಿದೆ" ಎಂದು ಭಾರತದ ಮಾಜಿ ಮುಖ್ಯ ಕೋಚ್ ಹೇಳಿದರು.
"ಒಂದು ವೇಳೆ ಭಾರತ ಈ ಬಾರಿ ಪ್ರಶಸ್ತು ಗೆಲ್ಲಲು ಸಾಧ್ಯವಾಗದಿದ್ದರೆ ಇನ್ನೂ ಮೂರು ವಿಶ್ವಕಪ್ ಪಂದ್ಯಾವಳಿಯಲ್ಲಿ ಕಪ್ ಗೆಲ್ಲುವುದು ಕಠಿವಾಗಲಿದೆ" ಎಂದು ಹೇಳಿದರು.
ತಂಡದ 7-8 ಆಟಗಾರರು ಅದ್ಭುತ ಫಾರ್ಮ್‌ನಲ್ಲಿದ್ದಾರೆ, ಹಲವು ಪ್ರಮುಖ ಆಟಗಾರರಿಗೆ ಇದು ಕೊನೆಯ ವಿಶ್ವಕಪ್ ಆಗಿರಬಹುದು. ಅವರು ಆಡುತ್ತಿರುವ ರೀತಿ, ಪರಿಸ್ಥಿತಿಗಳನ್ನು ಗಮನಿಸಿದರೆ ತಂಡವನ್ನು ಗೆಲ್ಲುವಂತೆ ಮಾಡಿದ್ದಾರೆ ಎಂದರು.
ಬೌಲಿಂಗ್ ಪಡೆಯನ್ನು ಶ್ಲಾಘಿಸಿದ ಶಾಸ್ತ್ರಿ
ಭಾರತದ ಬೌಲಿಂಗ್ ಪಡೆ ಬಗ್ಗೆ ಕೂಡ ರವಿಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಮೂವರೂ ಕೂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಅವರ ಸ್ಪಿನ್ ದಾಳಿ ಮಧ್ಯಮ ಓವರ್‌ಗಳಲ್ಲಿ ಪರಿಣಾಮಕಾರಿಯಾಗಿದೆ, ಪ್ರಸ್ತುತ ಬಹಳಷ್ಟು ಬೌಲರ್‌ಗಳು ಭಾರತ ಕಂಡ ಅತ್ಯುತ್ತಮ ಬೌಲರ್‌ಗಳು" ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಒಂದು ರಾತ್ರಿಯಲ್ಲಿ ಇದು ಆಗಿಲ್ಲ, ಸಾಕಷ್ಟ ಸಮಯ ತೆಗೆದುಕೊಂಡಿದೆ. ಅವರು ನಾಲ್ಕೈದು ವರ್ಷಗಳಿಂದ ಸತತವಾಗಿ ಪ್ರದರ್ಶನ ನೀಡುತ್ತಿದ್ದಾರೆ, ಮೂರು ವರ್ಷಗಳ ಹಿಂದೆ ಸಿರಾಜ್ ಕೂಡ ಸೇರಿಕೊಂಡಿದ್ದಾರೆ ಎಂದರು. ಏಕದಿನ ವಿಶ್ವಕಪ್ ಆರಂಭವಾದಾಗಿನಿಂದ ಇದು ಭಾರತ ತಂಡದ ಅತ್ಯುತ್ತಮ ಬೌಲಿಂಗ್ ದಾಳಿ ಎಂದು ಹೇಳಿದರು.
ಭಾರತ ನವೆಂಬರ್ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. 2019ರ ಏಕದಿನ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡು, ಫೈನಲ್‌ಗೆ ತಲುಪುವ ವಿಶ್ವಾಸದಲ್ಲಿದೆ.












Click it and Unblock the Notifications