Champions Trophy| NZ vs BAN: ಶತಕ ಬಾರಿಸಿ ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಮನೆದಾರಿ ತೋರಿಸಿದ ಕನ್ನಡಿಗ ರಚಿನ್
ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯದಲ್ಲಿ ಕನ್ನಡಿಗ ರಚಿನ್ ರವೀಂದ್ರ ಅವರ ಭರ್ಜರಿ ಶತಕದ ನೆರವಿನಿಂದ ನ್ಯೂಜಿಲೆಂಡ್ ಬಾಂಗ್ಲಾದೇಶದ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಮತ್ತು ಭಾರತ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪ್ರವೇಶಿಸಿದ್ದು, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಪಂದ್ಯಾವಳಿಯಿಂದಲೇ ಹೊರಬಿದ್ದಿವೆ.
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿತು. ನಾಯಕ ನಜ್ಮುಲ್ ಹೊಸೈನ್ ಶಾಂಟೋ 77 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಜೇಕರ್ ಅಲಿ 45 ರನ್ ಗಳಿಸಿದರೆ, ರಿಷದ್ ಹೊಸೈನ್ 26 ರನ್ ಗಳಿಸಿದರು.

ಮೈಕೆಲ್ ಬ್ರೇಸ್‌ವೆಲ್ 10 ಓವರ್ ಗಳಲ್ಲಿ 26 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದು ಮಿಂಚಿದರು. ವಿಲಿಯಮ್ ಓರೂರ್ಕಿ 2 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ ಮತ್ತು ಕೈಲ್ ಜೇಮಿಸನ್ ತಲಾ 1 ಒಂದು ವಿಕೆಟ್ ಪಡೆದರು.
ಕನ್ನಡಿಗ ರಚಿನ್ ರವೀಂದ್ರ ಶತಕ
237 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್‌ಗೆ ಬಾಂಗ್ಲಾದೇಶ ಬೌಲರ್ ಗಳು ಆರಂಭದಲ್ಲೇ ಆಘಾತ ನೀಡಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ವಿಲ್ ಯಂಗ್ ರನ್ ಗಳಿಸುವ ಮುನ್ನವೇ ಔಟಾದರೆ, ಕೇನ್ ವಿಲಿಯಮ್ಸನ್ 5 ರನ್ ಗಳಿಸಿ ಔಟಾದರು. 15 ರನ್ ಗಳಿಸುವಷ್ಟರಲ್ಲಿ ನ್ಯೂಜಿಲೆಂಡ್ ಎರಡು ವಿಕೆಟ್ ಕಳೆದುಕೊಂಡಿತು.
ಬಳಿಕ ಕ್ರೀಸ್‌ಗೆ ಬಂದ ರಚಿನ್ ರವೀಂದ್ರ ಜವಾಬ್ದಾರಿಯುತ ಆಟವಾಡಿದರು. 105 ಎಸೆತಗಳಲ್ಲಿ 12 ಬೌಂಡರಿ 1 ಸಿಕ್ಸರ್ ಸಹಿತ 112 ರನ್ ಗಳಿಸಿದರು. ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದ ರಚಿನ್ ರವೀಂದ್ರ ಇದೀಗ ಚಾಂಪಿಯನ್ಸ್ ಟ್ರೋಫಿಯ ತಮ್ಮ ಮೊದಲ ಪಂದ್ಯದಲ್ಲೂ ಶತಕ ಬಾರಿಸಿ, ಐಸಿಸಿ ಪಂದ್ಯಾವಳಿಯ ಎರಡೂ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ ವಿಶಿಷ್ಟ ದಾಖಲೆ ಮಾಡಿದರು.
ಡಿವೋನ್ ಕಾನ್ವೆ 30 ರನ್ ಗಳಿಸಿದರೆ, ಟಾಮ್ ಲಾಥಮ್ 55 ರನ್ ಗಳಿಸಿದರು. ಗ್ಲೆನ್ ಫಿಲಿಪ್ಸ್ ಅಜೇಯ 21 ರನ್ ಗಳಿಸಿದರೆ, ಮೈಕೆಲ್ ಬ್ರೇಸ್‌ವೆಲ್ ಅಜೇಯ 11 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಈ ಗೆಲುವಿನ ಮೂಲಕ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ತಲುಪಿವೆ. ಮಾರ್ಚ್ 3ರಂದು ಎರಡೂ ತಂಡಗಳು ಲೀಗ್ ಹಂತದ ಕೊನೆಯ ಪಂದ್ಯವನ್ನಾಡಲಿದ್ದು, ಅದು ಔಪಚಾರಿಕ ಪಂದ್ಯವಾಗಿರಲಿದೆ. 29 ವರ್ಷಗಳ ಬಳಿಕ ಐಸಿಸಿ ಪಂದ್ಯಾವಳಿ ಆಯೋಜನೆ ಮಾಡಿರುವ ಪಾಕಿಸ್ತಾನ ಲೀಗ್ ಹಂತದಲ್ಲೇ ಹೊರಬಿದ್ದಿದೆ.












Click it and Unblock the Notifications