NZ vs PAK: ಪ್ರಮುಖ ಆಟಗಾರರು ಇಲ್ಲದೆ ಪಾಕಿಸ್ತಾನವನ್ನು ಮಣಿಸಿ ಟಿ20 ಸರಣಿ ಗೆದ್ದ ನ್ಯೂಜಿಲೆಂಡ್
ನ್ಯೂಜಿಲೆಂಡ್‌ನ ಮೌಂಟ್ ಮೌಂಗನುಯ್‌ನ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆದ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನದ ವಿರುದ್ಧ 115 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. 5 ಪಂದ್ಯಗಳ ಟಿ20 ಸರಣಿಯ 4 ನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ 3-1 ಮುನ್ನಡೆ ಪಡೆದುಕೊಂಡಿದ್ದು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಗೆದ್ದುಕೊಂಡಿದೆ.
ಮೊದಲ ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿದ್ದರೆ, ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತ್ತು, ನಾಲ್ಕನೇ ಪಂದ್ಯದಲ್ಲಿ ವಾಪಸಾತಿ ಮಾಡಿದ ನ್ಯೂಜಿಲೆಂಡ್ ಪಾಕಿಸ್ತಾನವನ್ನು ಬಗ್ಗು ಬಡಿದು ಸರಣಿ ಗೆದ್ದುಕೊಂಡಿತು.

ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿತು. ಟಿಮ್ ಸೀಫರ್ಟ್ 22 ಎಸೆತಗಳಲ್ಲಿ 44 ರನ್ ಗಳಿಸಿದರೆ, ಫಿನ್ ಅಲೆನ್ ಕೇವಲ 20 ಎಸೆತಗಳಲ್ಲಿ 50 ರನ್ ಗಳಿಸಿದರು. ನಾಯಕ ಮೈಕೆಲ್ ಬ್ರೇಸ್‌ವೆಲ್ 26 ಎಸೆತಗಳಲ್ಲಿ ಅಜೇಯ 46 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಹ್ಯಾರಿಸ್ ರೌಫ್ 3 ವಿಕೆಟ್ ಪಡೆದರೆ, ಅಬ್ರಾರ್ ಅಹ್ಮದ್ 2 ವಿಕೆಟ್ ಪಡೆದರು.
ಬಳಿಕ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 16.2 ಓವರ್ ಗಳಲ್ಲಿ 105 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಕಳೆದ ಪಂದ್ಯದಲ್ಲಿ ಪಾಕಿಸ್ತಾನದ ಪರವಾಗಿ ವೇಗದ ಶತಕ ಗಳಿಸಿದ್ದ ಹಸನ್ ನವಾಜ್ 1 ರನ್‌ಗೆ ಔಟಾದರು. ಅಬ್ದುಲ್ ಸಮದ್ 44 ರನ್ ಗಳಿಸಿದರೆ, ಇರ್ಫಾನ್ ಖಾನ್ 24 ರನ್ ಗಳಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ಗಳಿಸಲಿಲ್ಲ.
ಜೇಕಬ್ ಡುಫಿ 4 ಓವರ್ ಗಳಲ್ಲಿ 20 ರನ್ ನೀಡಿ 4 ವಿಕೆಟ್ ಪಡೆದುಕೊಂಡು ಮಿಂಚಿದರು. ಜಾಕರಿ ಫೌಕ್ಸ್ 3 ವಿಕೆಟ್ ಪಡೆದರು. ವಿಲಿಯಮ್ ಓ ರೂರ್ಕ್, ಜೇಮ್ಸ್ ನೀಶಮ್ ಮತ್ತು ಇಶ್ ಸೋಧಿ ತಲಾ ಒಂದು ವಿಕೆಟ್ ಪಡೆದುಕೊಂಡರು.
ಸರಣಿಯ ಕೊನೆಯ ಟಿ20 ಪಂದ್ಯ ಮಾರ್ಚ್ 26ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ. ಈಗಾಗಲೇ ನ್ಯೂಜಿಲೆಂಡ್ ಸರಣಿ ಗೆದ್ದಿದ್ದು, ಕೊನೆಯ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ನ್ಯೂಜಿಲೆಂಡ್‌ನ ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿದ್ದು, ಯುವ ಆಟಗಾರರಿಗೆ ನ್ಯೂಜಿಲೆಂಡ್ ತಂಡದಲ್ಲಿ ಅವಕಾಶ ಸಿಕ್ಕಿದೆ. ಈ ತಂಡದ ಎದುರು ಕೂಡ ಪಾಕಿಸ್ತಾನ ಸರಣಿ ಸೋತು ಮುಜುಗರ ಅನುಭವಿಸಿದೆ.












Click it and Unblock the Notifications