ಏಷ್ಯಾಕಪ್‌ನಲ್ಲಿ ಸಿಗದ ಅವಕಾಶ: ಇನ್‌ಸ್ಟಾಗ್ರಾಂನಲ್ಲಿ ನವೀನ್ ಉಲ್ ಹಕ್ ಪೋಸ್ಟ್, ಕೊಹ್ಲಿ ಫ್ಯಾನ್ಸ್ ಏನಂದ್ರು?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಆವೃತ್ತಿಯಲ್ಲಿ ಅತಿ ಹೆಚ್ಚು ವಿವಾದಕ್ಕೆ ಕಾರಣವಾಗಿದ್ದು, ವಿರಾಟ್ ಕೊಹ್ಲಿ ಮತ್ತು ನವೀನ್-ಉಲ್-ಹಕ್ ನಡುವಿನ ಜಗಳ, ಈ ಜಗಳದ ನಂತರ ನವೀನ್ ಉಲ್ ಹಕ್ ಸಾಕಷ್ಟು ಹೆಸರು ಮಾಡಿದರು.
ವೇಗದ ಬೌಲರ್ ಏಷ್ಯಾಕಪ್ 2023 ಪಂದ್ಯಾವಳಿಗೆ ಅಫ್ಘಾನಿಸ್ತಾನ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲವಾಗಿದ್ದಾರೆ. ನಿಗೂಢ ಅರ್ಥಗಳನ್ನು ಹೊಂದಿರುವ ಪೋಸ್ಟ್‌ಗಳನ್ನು ಹಾಕುವ ಮೂಲಕ ತಿರುಗೇಟು ನೀಡುವ ಅವರು, ಈ ಬಾರಿ ಕೂಡ ಅಂತಹದ್ದೇ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ನಿಮ್ಮ ಕಣ್ಣುಗಳು ಕತ್ತಲೆಗೆ ಎಷ್ಟು ಚೆನ್ನಾಗಿ ಹೊಂದಿಕೊಂಡರೂ, ನೀವು ಅದನ್ನು ಎಂದಿಗೂ ಬೆಳಕೆಂದು ತಪ್ಪಾಗಿ ಭಾವಿಸುವುದಿಲ್ಲ" ಎಂದು ನವೀನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದಿದ್ದಾರೆ.

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಆಯ್ಕೆಗಾರ ಅಸಾದುಲ್ಲಾ ಖಾನ್ ಅವರು ತಂಡದ ಪ್ರಕಟಣೆಯ ನಂತರ ಪತ್ರಿಕಾ ಪ್ರಕಟಣೆಯಲ್ಲಿ, "ನಮ್ಮ ಸಂಪೂರ್ಣ ಏಕಾಗ್ರತೆಯು ಮುಂಬರುವ ಏಷ್ಯಾ ಕಪ್ ಮತ್ತು ವಿಶ್ವಕಪ್ 2023 ರ ಎರಡು ದೊಡ್ಡ ಪಂದ್ಯಾವಳಿಗೆ ತಂಡವನ್ನು ಸಿದ್ಧಪಡಿಸುವುದಾಗಿದೆ. ಪಾಕಿಸ್ತಾನ ವಿರುದ್ಧದ ಈ ಮೂರು ಪಂದ್ಯಗಳ ಏಕದಿನ ಸರಣಿ ಮುಂಬರುವ ಎರಡು ಈವೆಂಟ್‌ಗಳಿಗೆ ತಂಡವನ್ನು ಸಿದ್ಧಪಡಿಸಲು ನಮಗೆ ಅದ್ಭುತ ಅವಕಾಶವನ್ನು ನೀಡಿದೆ ಎಂದು ಹೇಳಿದ್ದರು. ಆದರೆ, ಪಾಕಿಸ್ತಾನದ ವಿರುದ್ದದ ಸರಣಿಯಲ್ಲಿ ಅಫ್ಘಾನಿಸ್ತಾನ ಮೂರು ಪಂದ್ಯಗಳನ್ನು ಸೋಲುವ ಮೂಲಕ ನಿರಾಸೆ ಅನುಭವಿಸಿತ್ತು.
ನಿರಾಸೆ ವ್ಯಕ್ತಪಡಿಸಿದ ಕೊಹ್ಲಿ ಫ್ಯಾನ್ಸ್
ಇನ್ನು ನವೀನ್ ಉಲ್ ಹಕ್ ಏಷ್ಯಾಕಪ್‌ಗಾಗಿ ತಂಡಕ್ಕೆ ಆಯ್ಕೆಯಾಗದ ಬಗ್ಗೆ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತ-ಅಫ್ಘಾನಿಸ್ತಾನ ಪಂದ್ಯ ಏನಾದರೂ ನಡೆದರೆ, ಒಂದು ವೇಳೆ ನವೀನ್ ಉಲ್ ಹಕ್ ತಂಡದಲ್ಲಿ ಇದ್ದಿದ್ದರೆ ಇಬ್ಬರ ನಡುವಿನ ಪೈಪೋಟಿಯನ್ನು ನೋಡಬಹುದಿತ್ತು, ಈಗ ಆ ಅವಕಾಶ ಇಲ್ಲವೆಂದು ನಿರಾಸೆಗೊಂಡಿದ್ದಾರೆ.
ವಿರಾಟ್ ಕೊಹ್ಲಿ - ನವೀನ್ ಉಲ್ ಹಕ್ ಮುಖಾಮುಖಿಯಾಗುವುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ನವೀನ್ ಉಲ್ ಹಕ್ ತಂಡಕ್ಕೆ ಆಯ್ಕೆಯಾಗಲು ವಿಫಲವಾಗಿರುವುದು ಕೊಹ್ಲಿ ಅಭಿಮಾನಿಗಳಿಗೆ ಹೆಚ್ಚಿನ ಬೇಸರ ಉಂಟು ಮಾಡಿದೆ.
ವಿಶ್ವಕಪ್ ತಂಡಕ್ಕೆ ಕೂಡ ನವೀನ್ ಉಲ್ ಹಕ್ ಆಯ್ಕೆಯಾಗುವುದು ಅನುಮಾನವಾಗಿದೆ. ಒಂದು ವೇಳೆ ಅವರು ವಿಶ್ವಕಪ್‌ಗೂ ಆಯ್ಕೆಯಾಗದಿದ್ದರೆ, ಇಬ್ಬರ ನಡುವಿನ ಮುಖಾಮುಖಿಯನ್ನು ನೋಡಲು ಮುಂದಿನ ಐಪಿಎಲ್‌ವರೆಗೆ ಕಾಯಬೇಕಾಗುತ್ತದೆ. ನವೀನ್ ಉಲ್ ಹಕ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಾಗಿ ಆಡುತ್ತಿದ್ದು, ಮುಂದಿನ ವರ್ಷ ಕೂಡ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.












Click it and Unblock the Notifications