National Games: ಭಾರತದ ಹೊಸ ಸ್ಪೋರ್ಟ್ಸ್ ಹಬ್ ಉತ್ತರಾಖಂಡದಲ್ಲಿ ರಾಷ್ಟ್ರೀಯ ಕ್ರೀಡಾಕೂಡಕ್ಕೆ ತೆರೆ
38ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಉತ್ತರಾಖಂಡದ ಅಂತರರಾಷ್ಟ್ರೀಯ ಕ್ರೀಡಾ ಸಂಕೀರ್ಣವಾದ ಹಲ್ದ್ವಾನಿಯಲ್ಲಿ ನಡೆದ 38 ನೇ ರಾಷ್ಟ್ರೀಯ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭಾಗವಹಿಸಿದ್ದರು. ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಉತ್ತರಾಖಂಡ ಒತ್ತು ನೀಡಿ ಕ್ರೀಡಾ ಕೇಂದ್ರವನ್ನಾಗಿ ಪರಿವರ್ತನೆ ಮಾಡಿದ್ದಕ್ಕೆ ಗೃಹ ಸಚಿವ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಡಸಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮಾತನಾಡಿ, ಇಂತಹ ಕ್ರೀಡಾಕೂಟಗಳು ಜಾಗತಿಕ ಮಟ್ಟದಲ್ಲಿ ಕ್ರೀಡಾ ಕೇಂದ್ರವಾಗಲು ಹೊರಟಿರುವ ಭಾರತಕ್ಕೆ ಮುನ್ನುಡಿ ಬರೆಯುತ್ತವೆ ಎಂದು ಹೇಳಿದರು. ಕ್ರೀಡೆಯಲ್ಲಿ ನಾವು ಗೆಲ್ಲುತ್ತೇವೆ ಅಥವಾ ಕಲಿಯುತ್ತೇವೆ ನಾವು ಅರ್ಜುನರಂತಹ ಧೈರ್ಯಶಾಲಿ ಯೋಧರ ನೆಲದಿಂದ ಬಂದಿದ್ದೇವೆ ಎನ್ನುವ ಸಂದೇಶವನ್ನು ನಾವು ಜಗತ್ತಿಗೆ ತಿಳಿಸಬಬೇಕು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದರು.

ಸರ್ವಿಸಸ್‌ಗೆ ಅಗ್ರಸ್ಥಾನ
ರಾಷ್ಟ್ರೀಯ ಕ್ರೀಡಾಕೂಟದಲ್ಲಿ 68 ಚಿನ್ನ ಸೇರಿದಂತೆ 121 ಪದಕ ಗೆದ್ದಿರುವ ಸರ್ವೀಸಸ್ ಹೆಚ್ಚು ಪದಕ ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರ 198 ಪದಕಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಹೆಚ್ಚು ಪದಕ ಗೆದ್ದರೂ ಚಿನ್ನದ ಪದಕ ಕಡಿಮೆ ಇರುವ ಕಾರಣ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. 153 ಪದಕಗಳೊಂದಿಗೆ ಹರಿಯಾಣ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು. ಕರ್ನಾಟಕ ಮತ್ತು ಮಧ್ಯಪ್ರದೇಶವು ಐದನೇ ಸ್ಥಾನ ಪಡೆದುಕೊಂಡಿವೆ.
ಈ ಕ್ರೀಡಾಕೂಟದಲ್ಲಿ ಒಟ್ಟು 38 ತಂಡಗಳನ್ನು ಪ್ರತಿನಿಧಿಸುವ 10,000 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು. ಹರಿದ್ವಾರ, ನೈನಿತಾಲ್, ಹಲ್ದ್ವಾನಿ, ರುದ್ರಪುರ, ಶಿವಪುರಿ ಮತ್ತು ನ್ಯೂ ತೆಹ್ರಿ ಎಂಬ ಆರು ನಗರಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಥ್ಲೆಟಿಕ್ಸ್, ಶೂಟಿಂಗ್, ಕುಸ್ತಿ, ಈಜು, ಹಾಕಿ, ಬಾಕ್ಸಿಂಗ್, ಬ್ಯಾಡ್ಮಿಂಟನ್, ವೇಟ್‌ಲಿಫ್ಟಿಂಗ್, ಫುಟ್‌ಬಾಲ್, ಟೆನಿಸ್ ಮತ್ತು ಟೇಬಲ್ ಟೆನ್ನಿಸ್ ಸೇರಿದಂತೆ ಅನೇಕ ಕ್ರೀಡೆಗಳನ್ನು ಆಡಿಸಲಾಯಿತು.
ಜನವರಿ 28ರಂದು ಡೆಹ್ರಾಡೂನ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕ್ರೀಡಾಕೂಟವನ್ನು ಆಯೋಜಿಸುವ ಬಗ್ಗೆ ಉತ್ತಾರಖಂಡ ಸಿಎಂ ಧಾಮಿ ಹೆಮ್ಮೆ ವ್ಯಕ್ತಪಡಿಸಿದ್ದರು.
ಒಲಿಂಪಿಕ್ ಪದಕ ವಿಜೇತರಾದ ಲೊವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಸ್ವಪ್ನಿಲ್ ಕುಸಾಲೆ (ಶೂಟಿಂಗ್), ಸರಬ್ಜೋತ್ ಸಿಂಗ್ (ಶೂಟಿಂಗ್) ಮತ್ತು ವಿಜಯ್ ಕುಮಾರ್ (ಶೂಟಿಂಗ್) ಸೇರಿದಂತೆ ಪ್ರಮುಖ ಭಾರತೀಯ ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಭಾಗವಿಸಿದ್ದು, ಕ್ರೀಡಾಸಕ್ತರನ್ನು ಸೆಳೆದಿದ್ದರು.
ಕ್ರೀಡಾಕೂಟದಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ ಒದಗಿಸುವ ಜೊತೆಗೆ ಕ್ರೀಡಾಪಟುಗಳಿಗೆ ವಿಶೇಷ ಆತಿಥ್ಯವನ್ನು ನೀಡಲಾಗಿತ್ತು. ಎಲ್ಲಾ ರೀತಿಯ ಭದ್ರತೆಗಳನ್ನು ಒದಗಿಸುವ ಜೊತೆಗೆ ಯಾವುದೇ ಅನಾನುಕೂಲವಾಗದಂತೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು.
ರಾಷ್ಟ್ರೀಯ ಕ್ರೀಡಾಕೂಟಕ್ಕಾಗಿ ಡೆಹ್ರಾಡೂನ್‌ನಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣವನ್ನು ಇತರ ಸ್ಥಳಗಳ ಜೊತೆಗೆ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನವೀಕರಿಸಲಾಗಿತ್ತು. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೆಚ್ಚಿನ ಆಸಕ್ತಿ ವಹಿಸಿದ್ದರು. ಅವರೇ ಸ್ವತಃ ಆಗಮಿಸಿ ಕ್ರೀಡಾಪಟುಗಳನ್ನು ಸ್ವಾಗತಿಸಿದ್ದರು.












Click it and Unblock the Notifications