ಭಿಕ್ಷೆ ಬೇಡಿ ದತ್ತು ಮಗಳ ಕನಸಿಗೆ ಆಸರೆಯಾಗಿ ನಿಂತ ಮಂಗಳಮುಖಿ
ಮೈಸೂರು, ಜನವರಿ 09; ತೃತೀಯಲಿಂಗಿಗಳು ಅಥವಾ ಮಂಗಳಮುಖಿಯರೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಮೈಸೂರಿನ ಮಂಗಳಮುಖಿಯೊಬ್ಬರು ಹೆಣ್ಣು ಮಗುವೊಂದನ್ನು ಪಾಲನೆ ಮಾಡುವ ಜೊತೆಗೆ ಆಕೆ ರಾಷ್ಟ್ರೀಯ ಕಿಕ್ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಆಸರೆಯಾಗಿ ನಿಂತಿದ್ದಾರೆ.
ಮೈಸೂರು ನಗರದ ಉದಯಗಿರಿಯ ಅಕ್ರಂ ಪಾಷಾ ಅಲಿಯಾಸ್ ಶಭಾನ ತೃತೀಯಲಿಂಗಿಯಾಗಿ ಬದುಕು ಸಾಗಿಸುತ್ತಿದ್ದಾರೆ. ತನ್ನದಲ್ಲದ ತಪ್ಪಿಗೆ ಸಮಾಜದ ನಿಂದನೆಗೆ ಒಳಗಾಗಿ ನೋವು ಅನುಭವಿಸಿದ್ದಾರೆ. ಇವತ್ತಿಗೂ ಮಂಗಳಮುಖಿ ಎಂದರೆ ಸಮಾಜ ನಿರ್ಲಕ್ಷ್ಯದಿಂದ ನೋಡುತ್ತದೆ. ಆದರೆ ಈ ಎಲ್ಲಾ ಅಪಮಾನಗಳನ್ನು ಮೆಟ್ಟಿ ನಿಂತ ಶಭಾನ ಸದ್ಯ ಹೆಣ್ಣುಮಗುವೊಂದರ ಲಾಲನೆ-ಪಾಲನೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅಲ್ಲದೆ, ಆ ಬಾಲಕಿ ಸಾಧನೆ ಹಾದಿಗೆ ಸಾಗಲು ಭಿಕ್ಷೆ ಬೇಡಿ ಬಂದ ಹಣದಿಂದ ಕಿಕ್ ಬಾಕ್ಸಿಂಗ್ ಕಲಿಸುತ್ತಿದ್ದಾರೆ.
ಶಭಾನ ಮಂಗಳಮುಖಿಯಾದರೂ ಮನುಷ್ಯತ್ವ ಅಂತಃಕರಣಕ್ಕೆ ಸದಾ ಮಿಡಿಯುತ್ತಾರೆ. ಹಾಗಾಗಿಯೇ 15 ವರ್ಷದ ಫಾತಿಮಾ ಎಂಬ ಬಾಲಕಿಯನ್ನು ತಮ್ಮ ಸ್ವಂತ ದುಡಿಮೆಯಲ್ಲಿ ಸಾಕಿ ಸಲಹುತ್ತಿದ್ದಾರೆ. ಕೇವಲ ಫಾತಿಮಾಳ ಜವಾಬ್ದಾರಿ ಶಭಾನ ಅವರ ಹೆಗಲ ಮೇಲಿಲ್ಲ. ಬದಲಿಗೆ ಆಕೆಯ ಕುಟುಂಬದವರ ಪೋಷಣೆಯನ್ನೂ ಮಾಡುತ್ತಿದ್ದಾರೆ. ಬೆಳಗ್ಗೆ ಭಿಕ್ಷೆಗೆ ಶಭಾನ ಹೋದರೆ ಮತ್ತೆ ಬರುವುದು ರಾತ್ರಿಯೇ. ಅಲ್ಲಿಂದ ಬಂದ ದುಡ್ಡಿನಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಸದ್ಯ ಫಾತಿಮಾ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಏಷಿಯನ್ ಹಂತಕ್ಕೆ ಸೆಲೆಕ್ಟ್; ಸದ್ಯ ಈ ಫಾತಿಮಾ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ವಾಕೋ ಇಂಡಿಯಾ ನ್ಯಾಷನಲ್ ಕಿಕ್ ಬಾಕ್ಸಿಂಗ್-2021ರಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, ಏಷಿಯನ್ ಲೆವೆಲ್‌ಗೆ ಆಯ್ಕೆಯಾಗಿದ್ದಾಳೆ. ಅಚ್ಚರಿಯೆಂದರೆ ಈ ಹುಡುಗಿ ಸಾಧನೆ ಹಿಂದೆ ಶಭಾನ ಅವರ ಶ್ರಮ, ತ್ಯಾಗ ದೊಡ್ಡದು. ತೃತೀಯಲಿಂಗಿಗಳೆಂದರೆ ಬೇರೆಯವರ ಬಳಿ ದುಡ್ಡು ಕೀಳುತ್ತಾರೆ ಎಂಬ ಭಾವನೆಯನ್ನು ತೊಲಗಿಸಿ ಬಾಲಕಿಯ ಸಾಧನೆಗೆ ಊರುಗೋಲಾಗಿ ಕೆಲಸ ಮಾಡುತ್ತಿದ್ದಾರೆ.
ದೇಶಕ್ಕೆ ಕೀರ್ತಿ ತರುವೆ: ತನ್ನ ಭವಿಷ್ಯದ ಬಗ್ಗೆ ಇಷ್ಟೆಲ್ಲಾ ನೆರವು ನೀಡಿದ ಶಭಾನ ಬಗ್ಗೆ ಫಾತಿಮಾ ಮಾತನಾಡಿದ್ದು, "ಶಭಾನ ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಶಾಲೆಗೆ ಸೇರಿಸಿದ್ದಾರೆ, ಜೊತೆಗೆ ನಮ್ಮ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಸದ್ಯ ನಾನು ಕಿಕ್ ಬಾಕ್ಸಿಂಗ್‌ನಲ್ಲಿ ಸಾಧನೆ ಮಾಡಲು ಅವರೇ ಕಾರಣ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ದೇಶದ ಕೀರ್ತಿ ಹೆಚ್ಚಿಸುವ ಕನಸು ನನ್ನದು. ಆ ಮೂಲಕ ಶಭಾನ ಅವರ ಕನಸನ್ನು ನನಸು ಮಾಡುತ್ತೇನೆ" ಎಂದು ಹೇಳಿದ್ದಾರೆ.

ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ತರಬೇತುದಾರ ಎಸ್. ಜಶ್ವಂತ್ ಮಾರ್ಗದರ್ಶನದಲ್ಲಿ ಫಾತಿಮಾ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಮಾರು 21 ಪದಕಗಳನ್ನು ಗಳಿಸಿದ್ದಾರೆ. ಈ ಬಾರಿ ನಡೆದ ವಾಕೋ ಇಂಡಿಯಾ ನ್ಯಾಷನಲ್ ಕಿಕ್ ಬಾಕ್ಸಿಂಗ್ ಸರ್ಧೆಯಲ್ಲಿ 40 ಕೆ.ಜಿ. ತೂಕದ ವಿಭಾಗದಲ್ಲಿ ಚಿನ್ನ ಗಳಿಸುವುದರ ಮೂಲಕ ಸಾಧನೆ ಓಟವನ್ನು ಮುಂದುವರೆಸಿದ್ದಾರೆ.
"ಮಂಗಳಮುಖಿಯರೆಂದರೆ ಬರಿ ನಿಂದಿಸಿ, ಅವಮಾನ ಮಾಡಬೇಡಿ. ನಮಗೂ ಮನಸ್ಸಿದೆ, ಅದಕ್ಕೂ ಘಾಸಿಯಾಗುತ್ತದೆ. ಸಮಾಜ ನಮ್ಮನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸಮಾಜದಲ್ಲಿ ತೃತೀಯ ಲಿಂಗಿಗಳು ಏನೂ ತಪ್ಪು ಮಾಡಿಲ್ಲ. ನಾನು ಆದಷ್ಟು ಫಾತಿಮಾಳ ಪ್ರತಿಭೆ ಬೆಳಗಲು ಪ್ರಯತ್ನಿಸುತ್ತಿದ್ದೇನೆ. ಇವಳು ಈ ಮಟ್ಟಕ್ಕೆ ಬೆಳೆಯಲು ಹಲವು ದಾನಿಗಳು, ಸಂಘಸಂಸ್ಥೆಗಳು ನೆರವು ನೀಡಿವೆ. ಅವರ ಸಹಕಾರವನ್ನು ನಾನೆಂದು ಮರೆಯವುದಿಲ್ಲ" ಎಂದು ಶಭಾನ ಹೇಳುತ್ತಾರೆ.












Click it and Unblock the Notifications