U-19 World Cup: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಬೃಹತ್ ಗೆಲುವು
ಬ್ಲೋಮ್‌ಫಾಂಟೈನ್‌ನ ಮಾಂಗಾಂಗ್ ಓವಲ್‌ನಲ್ಲಿ ನಡೆದ ಅಂಡರ್ 19 ವಿಶ್ವಕಪ್‌ನ ಮೊದಲ ಸೂಪರ್ ಸಿಕ್ಸ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 214 ರನ್‌ಗಳಿಂದ ಬೃಹತ್ ಗೆಲವು ಸಾಧಿಸಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 295 ರನ್ ಕಲೆಹಾಕಿತು.

ಆದರ್ಶ್ ಸಿಂಗ್ 52 ರನ್ ಗಳಿಸಿದರೆ, ಸರ್ಫರಾಜ್ ಖಾನ್ ಅವರ ತಮ್ಮ ಮುಷೀರ್ ಖಾನ್ 126 ಎಸೆತಗಳಲ್ಲಿ 13 ಬೌಂಡರಿ 3 ಸಿಕ್ಸರ್ ಸಹಿತ 131 ರನ್ ಗಳಿಸುವ ಮೂಲಕ ಮತ್ತೊಮ್ಮೆ ಭಾರತ ತಂಡಕ್ಕೆ ಆಸರೆಯಾದರು. ನಾಯಕ ಉದಯ್ ಶರಣ್ 34 ರನ್, ಅರಾವೆಲ್ಲಿ ಅವಾನಿಶ್ 17 ರನ್, ಸಚಿನ್ ದಾಸ್ 15 ರನ್ ಗಳಿಸಿದರು. ನ್ಯೂಜಿಲೆಂಡ್‌ನ ಮಸೋನ್ ಕ್ಲಾರ್ಕ್ 4 ವಿಕೆಟ್ ಪಡೆದರು.
ಭಾರತದ ಬಿಗಿ ಬೌಲಿಂಗ್‌ಗೆ ಬೆಚ್ಚಿದ ನ್ಯೂಜಿಲೆಂಡ್
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ ಭಾರತದ ಬಿಗಿ ಬೌಲಿಂಗ್ ದಾಳಿಗೆ ಬೆಚ್ಚಿತು. ರನ್ ಗಳಿಸಲು ಪರದಾಡಿದ ನ್ಯೂಜಿಲೆಂಡ್ ಬ್ಯಾಟರ್ ಗಳು ಒಟ್ಟು 100 ರನ್ ಗಳಿಸಲು ಕೂಡ ಸಾಧ್ಯವಾಗಲಿಲ್ಲ. 28.1 ಓವರ್ ಗಳಲ್ಲಿ 81 ರನ್ ಗಳಿಸುವಷ್ಟರಲ್ಲಿ ಆಲೌಟ್ ಆದರು.
ಜೇಮ್ ನೆಲ್ಸನ್ 10, ಆಸ್ಕರ್ ಜಾಕ್ಸನ್ 19, ಜಾಕ್ ಕಮ್ಮಿಂಗ್ 16, ಅಲೆಕ್ಸ್ ಥಾಂಪ್ಸನ್ 12 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಭಾರತದ ಪರವಾಗಿ ಸೌಮಿ ಪಾಂಡೆ 10 ಓವರ್ ಗಳಲ್ಲಿ ಕೇವಲ 19 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದುಕೊಂಡರು.
ರಾಜ್ ಲಂಬಿನಿ ಮತ್ತು ಮುಷೀರ್ ಖಾನ್ ತಲಾ ಎರಡು ವಿಕೆಟ್ ಪಡೆದರು. ನಮನ್ ತಿವಾರಿ ಮತ್ತು ಅರ್ಶಿನ್ ಕುಲಕರ್ಣಿ ತಲಾ ಒಂದು ವಿಕೆಟ್ ಪಡೆದುಕೊಂಡರು. ಶತಕ ಸಿಡಿಸಿದ್ದಲ್ಲದೆ ಎರಡು ವಿಕೆಟ್ ಪಡೆದ ಮುಷೀರ್ ಖಾನ್ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ಭಾರತ ಮುಂದಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಲಿದೆ. ಫೆಬ್ರವರಿ 2ರಂದು ಈ ಪಂದ್ಯ ನಡೆಯಲಿದ್ದು, ಭಾರತ ಈಗಾಗಲೇ ಬಹುತೇಕ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.












Click it and Unblock the Notifications