WPL 2025: ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಗೆಲುವು; ಫೈನಲ್‌ಗೆ ಮುಂಬೈ ಇಂಡಿಯನ್ಸ್
ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2025ರ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 47 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು ಫೈನಲ್‌ಗೆ ಲಗ್ಗೆಯಿಟ್ಟಿದೆ. ಗುರುವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹರ್ಮನ್‌ಪ್ರೀತ್ ಕೌರ್ ಪಡೆ ಗುಜರಾತ್ ಜೈಂಟ್ಸ್ ತಂಡದ ಮೊದಲ ಫೈನಲ್ ಪ್ರವೇಶದ ಕನಸನ್ನು ಛಿದ್ರಗೊಳಿಸಿತು.
ಸತತ ಮೂರನೇ ಬಾರಿ ಎಲಿಮಿನೇಟರ್ ಸುತ್ತಿಗೆ ಅರ್ಹತೆ ಪಡೆದ ಮುಂಬೈ ಇಂಡಿಯನ್ಸ್ ಎರಡನೇ ಬಾರಿ ಫೈನಲ್ ಪ್ರವೇಶಿಸಿದೆ. ಮಹಿಳಾ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯಲ್ಲೇ ಫೈನಲ್ ಪ್ರವೇಶಿಸಿದ್ದ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು, 2024ರ ಆವೃತ್ತಿಯಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಸೋತು ಆಘಾತ ಅನುಭವಿಸಿತ್ತು.

ಸತತ ಮೂರನೇ ಬಾರಿ ಎಲಿಮಿನೇಟರ್ ಹಂತ ತಲುಪಿದ್ದ ಮುಂಬೈ ಇಂಡಿಯನ್ಸ್ ಮೊದಲ ಬಾರಿಗೆ ಎಲಿಮಿನೇಟರ್ ಸುತ್ತು ಪ್ರವೇಶಿಸಿರುವ ಗುಜರಾತ್ ಜೈಂಟ್ಸ್ ತಂಡವನ್ನು ಸುಲಭವಾಗಿ ಮಣಿಸಿತು. ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 213 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಹೇಯ್ಲೀ ಮ್ಯಾಥ್ಯೂಸ್ 50 ಎಸೆತಗಳಲ್ಲಿ 77 ರನ್ ಗಳಿಸಿದರೆ, ನ್ಯಾಟ್ ಸಿವರ್ ಬ್ರಂಟ್ 41 ಎಸೆತಗಳಲ್ಲಿ 77 ರನ್ ಗಳಿಸಿ ಮಿಂಚಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ 12 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ ಸಹಿತ 36 ರನ್ ಗಳಿಸಿದರು. ಒತ್ತಡದಲ್ಲಿ ಆಡಿದ ಗುಜರಾತ್ ಜೈಂಟ್ಸ್ ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದಲ್ಲದೆ, ಫೀಲ್ಡಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿತು.
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ಯಾವ ಹಂತದಲ್ಲೂ ಸ್ಪರ್ಧೆಯನ್ನು ನೀಡಲೇ ಇಲ್ಲ. ತಂಡದ ಬ್ಯಾಟಿಂಗ್ ಶಕ್ತಿಯಾದ ಬೆಥ್ ಮೂನಿ ಕೇವಲ 6 ರನ್ ಗಳಿಸಿ ಔಟಾದರೆ, ನಾಯಕಿ ಆಶ್ಲೆ ಗಾರ್ಡ್ನರ್ 8 ರನ್ ಗಳಿಸಿ ಔಟಾದರು. ಹರ್ಲೀನ್ ಡಿಯೋಲ್ 8 ರನ್ ಗಳಿಸಿದರು.
ಡೇನಿಯಲ್ ಗಿಬ್ಸನ್ 34 ರನ್ ಗಳಿಸಿ ಹೋರಾಟ ಕೊಟ್ಟರೂ ರನೌಟ್‌ಗೆ ಬಲಿಯಾದರು. ಫೋಬೆ ಲಿಚ್‌ಫೀಲ್ಡ್ 31 ರನ್, ಭಾರ್ತಿ ಫುಲ್ಮಲಿ 30 ರನ್ ಗಳಿಸಿದರೂ ತಂಡವನ್ನು ಗೆಲುವಿನ ಸನಿಹ ಕೂಡ ಕರೆದೊಯ್ಯಲು ಆಗಲಿಲ್ಲ. ಅಂತಿಮವಾಗಿ ಗುಜರಾತ್ ಜೈಂಟ್ಸ್ 19.2 ಓವರ್ ಗಳಲ್ಲಿ 166 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ 47 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಹೇಯ್ಲೀ ಮ್ಯಾಥ್ಯೂಸ್ 3.2 ಓವರ್ ಗಳಲ್ಲಿ 31 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಅಮೆಲಿಯಾ ಕೆರ್ 2 ವಿಕೆಟ್ ಪಡೆದರೆ, ಶಬ್ನಮ್ ಇಸ್ಮಾಯಿಲ್ ಮತ್ತು ನ್ಯಾಟ್ ಸಿವರ್ ಬ್ರಂಟ್ ತಲಾ 1 ವಿಕೆಟ್ ಪಡೆದರು.
ಈ ಗೆಲುವಿನ ಮೂಲಕ ಮುಂಬೈ ಇಂಡಿಯನ್ಸ್ ಎರಡನೇ ಬಾರಿ ಫೈನಲ್ ಪ್ರವೇಶಿಸಿದೆ. ಸತತ ಮೂರು ಬಾರಿ ಫೈನಲ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಾರ್ಚ್ 15ರಂದು ಶನಿವಾರ ಸೆಣೆಸಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ತಂಡವಾಗಿದ್ದರೂ ಮೊದಲ ಎರಡು ಆವೃತ್ತಿಯಲ್ಲಿ ಫೈನಲ್ ಪಂದ್ಯದಲ್ಲಿ ಎಡವಿದೆ. ಈ ಬಾರಿ ಆ ತಪ್ಪು ತಿದ್ದಿಕೊಂಡು ಮೊದಲ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದೆ.












Click it and Unblock the Notifications