ODI World Cup: ಭಾರತ ಈ ಬಾರಿ ವಿಶ್ವಕಪ್ ಗೆಲ್ಲುತ್ತಾ? ಎಂಎಸ್ ಧೋನಿ ಹೇಳಿದ್ದೇನು
ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಇದುವರೆಗೆ ಆಡಿರುವ 5 ಪಂದ್ಯಗಳನ್ನೂ ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
2011ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆದಾಗ ಎಂಎಸ್ ಧೋನಿ ನಾಯಕತ್ವದ ಭಾರತ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ನಂತರ 2013ರಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು, ಅದಾದ ಬಳಿಕ ಕಳೆದ ಒಂದು ದಶಕದಲ್ಲಿ ಭಾರತ ಐಸಿಸಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿಲ್ಲ.

ಈಗ ಮತ್ತೊಮ್ಮೆ ಭಾರತದಲ್ಲಿ ವಿಶ್ವಕಪ್ ನಡೆಯುತ್ತಿರುವ ಕಾರಣ, ಭಾರತದ ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚಾಗಿದೆ. ಇನ್ನು ಇದೇ ಮೊದಲ ಬಾರಿಗೆ ಭಾರತ ತಂಡದ ಮಾಜಿ ನಾಯಕ ಧೋನಿ ಭಾರತದ ವಿಶ್ವಕಪ್ ಗೆಲ್ಲುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ.
ಭಾರತಕ್ಕೆ ಅವಕಾಶ ಇದೆ ಎಂದ ಧೋನಿ
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧೋನಿ ಭಾರತ ವಿಶ್ವಕಪ್ ಗೆಲ್ಲುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ""ಇದು ತುಂಬಾ ಒಳ್ಳೆಯ ತಂಡ. ತಂಡದ ಬ್ಯಾಲೆನ್ಸ್ ತುಂಬಾ ಚೆನ್ನಾಗಿದೆ. ಎಲ್ಲಾ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ, ಆದ್ದರಿಂದ ಎಲ್ಲವೂ ತುಂಬಾ ಚೆನ್ನಾಗಿ ಕಾಣುತ್ತಿದೆ. ನಾನು ಇದಕ್ಕಿಂತ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ. ಬುದ್ಧಿವಂತರಿಗೆ ಇಷ್ಟೇ ಸಾಕು," ಎಂದು ಹೇಳುವ ಮೂಲಕ ಭಾರತ ತಂಡ ಉತ್ತಮವಾಗಿದ್ದು, ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚಿದೆ ಎನ್ನುವ ಸಿಗ್ನಲ್ ಕೊಟ್ಟಿದ್ದಾರೆ.
ಮತ್ತೆ ಕಣಕ್ಕಿಳಿಯುತ್ತಾರೆ ಧೋನಿ
2023ರ ಐಪಿಎಲ್‌ನಲ್ಲಿ ಮೊಣಕಾಲಿನ ನಡುವೆಯೂ ತಂಡವನ್ನು ಮುನ್ನಡೆಸಿದ್ದ ಧೋನಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 42 ವರ್ಷದ ಅವರು ನಿವೃತ್ತಿಯಾಗುತ್ತಾರೆ ಎಂದೇ ಭಾವಿಸಲಾಗಿತ್ತು, ಆದರೆ ಈಗ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಕೊಟ್ಟಿದ್ದು 2024ರ ಐಪಿಎಲ್‌ನಲ್ಲಿ ಕೂಡ ಆಡುವ ಬಗ್ಗೆ ಸುಳಿವು ನೀಡಿದ್ದಾರೆ.
2023ರ ಐಪಿಎಲ್ ಬಳಿಕ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಅದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ನವೆಂಬರ್ ವೇಳೆಗೆ ಸಂಪೂರ್ಣವಾಗಿ ಫಿಟ್ ಆಗುವ ಸಾಧ್ಯತೆ ಇದ್ದು, ಮತ್ತೆ ಅಭ್ಯಾಸ ಆರಂಭಿಸುವ ಅವಕಾಶ ಇದೆ.
ಈ ಮೂಲಕ ಅವರು ಮತ್ತೆ ಸಿಎಸ್‌ಕೆ ತಂಡದ ನಾಯಕನಾಗಿ ಕಣಕ್ಕಿಳಿಯಲಿದ್ದು ಅಭಿಮಾನಿಗಳು ಮತ್ತೊಮ್ಮೆ ಅವರ ಆಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ. 2023ರ ಡಿಸೆಂಬರ್ ತಿಂಗಳಿನಲ್ಲಿ ಐಪಿಎಲ್ ಹರಾಜು ನಡೆಯಲಿದ್ದು, ಸಿಎಸ್‌ಕೆ ತಂಡದಲ್ಲಿ ಹಲವು ಬದಲಾವಣೆ ಮಾಡುವ ಸಾಧ್ಯತೆ ಇದೆ.












Click it and Unblock the Notifications