MS Dhoni: ಐಪಿಎಲ್‌ಗೆ ಮುನ್ನ ಮಹತ್ವದ ನಿರ್ಧಾರ ತೆಗೆದುಕೊಂಡ ಎಂಎಸ್ ಧೋನಿ
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ ಎಂಎಸ್ ಧೋನಿ ಐಪಿಎಲ್ 2025ರಲ್ಲಿ ಆಡಲು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಸಿಎಸ್‌ಕೆ ತಂಡದ ಹಲವು ಆಟಗಾರರು ಈಗಾಗಲೇ ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಧೋನಿ ಬ್ಯಾಟಿಂಗ್ ನೋಡಲು ಅವರ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಬಾರಿ ಬ್ಯಾಟಿಂಗ್‌ನಲ್ಲಿ ಮಿಂಚಲು ಎಂಎಸ್ ಧೋನಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಈ ಆವೃತ್ತಿಯಲ್ಲಿ ಅವರು ತಮ್ಮ ಬ್ಯಾಟ್‌ನ ತೂಕವನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೆಗಾ ಹರಾಜಿಗೆ ಮುನ್ನ ಅವರನ್ನು ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ 4 ಕೋಟಿ ರೂಪಾಯಿಗೆ ಸಿಎಸ್‌ಕೆ ರಿಟೇನ್ ಮಾಡಿಕೊಂಡಿದೆ. ಐಪಿಎಲ್‌ಗೆ ಫಿಟ್ ಆಗಲು ಅವರು ಈಗಾಗಲೇ ರಾಂಚಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಐಪಿಎಲ್‌ಗೆ ಮುನ್ನ ಸಿಎಸ್‌ಕೆ ಅಭ್ಯಾಸ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಬ್ಯಾಟ್ ತೂಕ ಕಡಿಮೆ ಮಾಡಲು ನಿರ್ಧಾರ!
ಎಂಎಸ್ ಧೋನಿ ಸಾಮಾನ್ಯವಾಗಿ 1250 ರಿಂದ 1300 ಗ್ರಾಂ ತೂಕದ ಬ್ಯಾಟ್ ಬಳಸುತ್ತಾರೆ. ಆದರೆ ಈ ಬಾರಿ ತಮ್ಮ ಬ್ಯಾಟ್ ತೂಕವನ್ನು ಕನಿಷ್ಠ 10 ರಿಂದ 20 ಗ್ರಾಂ ಕಡಿಮೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಧೋನಿ ಆರಂಭದ ದಿನಗಳಲ್ಲಿ ಭಾರವಾದ ಬ್ಯಾಟ್‌ಗಳಲ್ಲಿ ಆಡುತ್ತಿದ್ದರು.
ಮೀರತ್‌ನ ಪ್ರಸಿದ್ಧವಾದ ಕ್ರಿಕೆಟ್ ಸಲಕರಣೆಗಳ ತಯಾರಿಕೆ ಕಂಪನಿಯಾದ ಸ್ಯಾನ್ಸ್‌ಪರೀಲ್ಸ್ ಗ್ರೀನ್‌ಲ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್ ಇತ್ತೀಚೆಗೆ ಎಂಎಸ್ ಧೋನಿ ಅವರಿಗೆ ನಾಲ್ಕು ಬ್ಯಾಟ್‌ಗಳನ್ನು ಪೂರೈಕೆ ಮಾಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ. ಧೋನಿಗೆ ನೀಡಿರುವ ಎಲ್ಲಾ ಬ್ಯಾಟ್‌ಗಳಲ್ಲಿ 1230 ಗ್ರಾಂ ತೂಕ ಇವೆ ಎಂದು ವರದಿ ತಿಳಿಸಿದೆ.
ಸಿಎಸ್‌ಕೆಗೆ ತಲೆನೋವು ತಂದ ಬಿಸಿಸಿಐ
ಬಿಸಿಸಿಐ ಮಾಡಿರುವ ಹೊಸ ನಿಯಮ ಈಗ ಸಿಎಸ್‌ಕೆ ತಂಡಕ್ಕೆ ತಲೆನೋವಾಗಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಅಭ್ಯಾಸವು ಮಾರ್ಚ್ 10ರ ಬಳಿಕವಷ್ಟೇ ಆರಂಭವಾಗಲಿದೆ. ಮಾರ್ಚ್ 9ಕ್ಕೆ ಮುನ್ನ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವನ್ನು ಬಳಸಲು ಅನುಮತಿ ಇಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಕಟ್ಟುನಿಟ್ಟಾಗಿ ಹೇಳಿದೆ ಎಂದು ಸಿಎಸ್‌ಕೆ ಆಡಳಿತ ಮಂಡಳಿಯ ಮೂಲವೊಂದು ಬಹಿರಂಗಪಡಿಸಿದೆ.
ತರಬೇತಿಯ ವೇಳಾಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಬಿಸಿಸಿಐ ಕ್ರೀಡಾಂಗಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿರುವುದರಿಂದ ಮಾರ್ಚ್ 9ರವರೆಗೂ ತರಬೇತಿಗಾಗಿ ಎಂಎ ಚಿದಂಬರಂ ಕ್ರೀಡಾಂಗಣವನ್ನು ಬಳಸಲು ಅನುಮತಿ ಇರುವುದಿಲ್ಲ.
ಎಂಎಸ್ ಧೋನಿ ಈಗ ರಾಂಚಿಯನ್ನು ಅಭ್ಯಾಸವನ್ನು ಮಾಡುತ್ತಿದ್ದಾರೆ. 2024ರ ಆವೃತ್ತಿಯಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುತ್ತಿದ್ದ ಧೋನಿ, ಈ ಬಾರಿಯಾದರೂ ಇನ್ನೂ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ ಎಂದು ಅಭಿಮಾನಿಗಳು ಬಯಸಿದ್ದಾರೆ.












Click it and Unblock the Notifications