T20 Cricket: 10 ಓವರ್, 10 ರನ್‌ಗಳಿಗೆ ಆಲೌಟ್; 5 ಎಸೆತಗಳಲ್ಲಿ ಮುಗಿದ ಪಂದ್ಯ!
ಟಿ20 ಕ್ರಿಕೆಟ್‌ನಲ್ಲಿ ಕೆಟ್ಟ ದಾಖಲೆಯೊಂದು ನಿರ್ಮಾಣವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ತಂಡವೊಂದು ಕೇವಲ 10 ರನ್‌ಗಳಿಗೆ ಆಲೌಟ್ ಆಗಿದ್ದು, ಎದುರಾಳಿ ತಂಡ ಕೇವಲ 5 ಎಸೆತಗಳಲ್ಲಿ ಚೇಸ್ ಮಾಡುವ ಮೂಲಕ ಪಂದ್ಯವನ್ನು ಮುಗಿಸಿದೆ. ಈಗೀಗ ಕ್ರಿಕೆಟ್ ಆಡಲು ಆರಂಭಿಸಿರುವ ಮಂಗೋಲಿಯಾ ತಂಡವೇ ಈ ಕೆಟ್ಟ ದಾಖಲೆ ಮಾಡಿದೆ, ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಎ ಪಂದ್ಯಾವಳಿಯಲ್ಲಿ ಸಿಂಗಾಪುರ ವಿರುದ್ಧ 10 ಓವರ್ ಗಳಲ್ಲಿ ಕೇವಲ 10 ರನ್‌ಗಳಿಸುವಷ್ಟರಲ್ಲಿ ಆಲೌಟ್ ಆಗಿದೆ. ಇದು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಜಂಟಿ ಕಡಿಮೆ ಮೊತ್ತವಾಗಿದೆ.
ಟಾಸ್ ಗೆದ್ದ ಸಿಂಗಾಪುರ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಮಂಗೋಲಿಯಾ 10 ಓವರ್ ಗಳಲ್ಲಿ 10 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ತಂಡದ ಇಬ್ಬರು ಬ್ಯಾಟರ್ ತಲಾ 2 ರನ್ ಗಳಿಸಿದರೆ, 4 ಬ್ಯಾಟರ್ ಗಳು 1 ರನ್ ಗಳಿಸಿದರು, ಐದು ಬ್ಯಾಟರ್ ಗಳು ಸೊನ್ನೆಗೆ ಔಟಾಗುವ ಮೂಲಕ ಮತ್ತೊಂದು ಕೆಟ್ಟ ದಾಖಲೆ ಬರೆದರು. ಬೌಲರ್ ಗಳು ವೈಡ್ ಎಸೆಯುವ ಮೂಲಕ 2 ರನ್ ಬಿಟ್ಟುಕೊಟ್ಟರು.

ಸಿಂಗಾಪುರ ಪರವಾಗಿ ಹರ್ಷ ಭಾರದ್ವಾಜ್ 4 ಓವರ್ ಗಳಲ್ಲಿ 2 ಮೇಡನ್ ಓವರ್ ಮಾಡಿದ್ದಲ್ಲದೆ ಕೇವಲ 3 ರನ್ ಬಿಟ್ಟುಕೊಟ್ಟು 6 ವಿಕೆಟ್ ಪಡೆದರು. ಅಕ್ಷಯ್ ಪುರಿ 2 ವಿಕೆಟ್ ಪಡೆದರೆ, ರಾಹುಲ್ ಶೇಷಾದ್ರಿ ಮತ್ತು ರಮೇಶ್ ಕಲಿಮುತ್ತು ತಲಾ 1 ವಿಕೆಟ್ ಪಡೆದರು.
5 ಎಸೆತಗಳಲ್ಲಿ ಮುಗಿದ ಪಂದ್ಯ
11 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಂಗಾಪುರ ಮೊದಲ ಎಸೆದಲ್ಲಿ ಆರಂಭಿಕ ಆಟಗಾರನ ವಿಕೆಟ್ ಕಳೆದುಕೊಂಡರು ಅಂತಿಮವಾಗಿ 5 ಎಸೆತಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 13 ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸತತ ನಾಲ್ಕು ಪಂದ್ಯಗಳನ್ನು ಸೋತ ಮಂಗೋಲಿಯಾ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಬೃಹತ್ ಅಂತರದಲ್ಲಿ ಗೆದ್ದ ಸಿಂಗಾಪುರ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಹಾಂಕಾಂಗ್, ಕುವೈತ್, ಮಲೇಷಿಯಾ, ಸಿಂಗಾಪುರ, ಮಾಲ್ಡೀವ್ಸ್, ಮಯನ್ಮಾರ್, ಮಂಗೋಲಿಯಾ ಒಟ್ಟು 7 ತಂಡಗಳು ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಎ ಪಂದ್ಯಾವಳಿಯಲ್ಲಿ ಆಡುತ್ತಿದ್ದು, ಇಲ್ಲಿ ಚಾಂಪಿಯನ್ ಆಗುವ ತಂಡ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ.












Click it and Unblock the Notifications