Mohammed Siraj: ಆಶಾ ಭೋಸ್ಲೆ ಮೊಮ್ಮಗಳ ಜೊತೆ ಫೋಟೊ ಬಗ್ಗೆ ಸಿರಾಜ್ ಸ್ಪಷ್ಟನೆ
ಮೊಹಮ್ಮದ್ ಸಿರಾಜ್, ಭಾರತ ತಂಡದ ಪ್ರಮುಖ ವೇಗದ ಬೌಲರ್. 2025ರ ಐಪಿಎಲ್ ಮೆಗಾ ಹರಾಜಿಗೆ ಮೊದಲು ಆರ್ ಸಿಬಿ ಅವರನ್ನು ಬಿಡುಗಡೆ ಮಾಡಿತ್ತು, ಅವರು 12.5 ಕೋಟಿ ರೂಪಾಯಿಗೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಹರಾಜಾಗಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಬಳಿಕ ಅವರನ್ನು ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡದೆ ಬಿಸಿಸಿಐ ಶಾಕ್ ಕೊಟ್ಟಿದೆ.
ಸದ್ಯ ಭಾರತ ತಂಡಕ್ಕೆ ವಾಪಸಾತಿ ಮಾಡಲು ಸಿರಾಜ್ ಕೆಲಸ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಸಿರಾಜ್ ಬಗ್ಗೆ ವದಂತಿಯೊಂದು ಹರಿದಾಡಿತ್ತು. ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಅವರ ಜೊತೆ ಮೊಹಮ್ಮದ್ ಸಿರಾಜ್ ಇರುವ ಫೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ತಮ್ಮ ಸುಮಧುರ ಧ್ವನಿಗೆ ಹೆಸರುವಾಸಿಯಾದ ಯುವ ಗಾಯಕಿ ಜನೈ ಭೋಸ್ಲೆ ತಮ್ಮ 23 ನೇ ಹುಟ್ಟುಹಬ್ಬದ ಚಿತ್ರಗಳ ಸರಣಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿರುವ ಫೋಟೊವೊಂದರಲ್ಲಿ ಸಿರಾಜ್ ಜನೈ ಜೊತೆಗೆ ನಗುತ್ತಾ ಇರುವುದನ್ನು ನೋಡಬಹುದು.
ಫೋಟೊ ವೈರಲ್ ಆಗುತ್ತಿದ್ದಂತೆ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಹರಡಿದವು. ತಪ್ಪಾದ ಸಂದೇಶಗಳು ಹರಡುವ ಮುನ್ನವೇ ಇಬ್ಬರೂ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಜನೈ ಭೋಸ್ಲೆ ಅವರು ಸಿರಾಜ್‌ರನ್ನು ನನ್ನ ಪ್ರೀತಿಯ ಸೋದರ ಎಂದು ಕರೆದಿದ್ದಾರೆ.
ಮೊಹಮ್ಮದ್ ಸಿರಾಜ್ ಪ್ರತಿಕ್ರಿಯೆ
ಜನೈ ಭೋಸ್ಲೆ ಅವರ ಪೋಸ್ಟ್‌ಗೆ ಮೊಹಮ್ಮದ್ ಸಿರಾಜ್ ಕೂಡ ಪ್ರತಿಕ್ರಿಯೆ ನೀಡಿದ್ದು, ತಂಗಿ ಎಂದು ಕರೆದಿದ್ದಾರೆ. ಇಬ್ಬರ ನಡುವೆ ಏನೋ ಇದೆ ಎನ್ನುವ ಗುಸುಗುಸು ಹಬ್ಬುವ ಮೊದಲೇ ಇಬ್ಬರೂ ತಮ್ಮ ನಡುವಿನ ಬಾಂಧವ್ಯದ ಬಗ್ಗೆ ಸ್ಪಷ್ಟನೆ ಕೊಡುವ ಮೂಲಕ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.
ಅಭ್ಯಾಸದತ್ತ ಸಿರಾಜ್ ಗಮನ
ಭಾರತ ತಂಡದಲ್ಲಿ ಅವಕಾಶ ಕೈತಪ್ಪಿದ ನಂತರ ವಾಪಸಾತಿ ಮಾಡಲು ಮೊಹಮ್ಮದ್ ಸಿರಾಜ್ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅವಕಾಶ ಸಿಗದ ಕಾರಣ ಸಿರಾಜ್ ಈಗ ಐಪಿಎಲ್‌ನತ್ತ ಗಮನ ಹರಿಸಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ಭಾರತ ತಂಡದಲ್ಲಿ ಅವಕಾಶ ಪಡೆದುಕೊಳ್ಳುವುದು ಅವರ ಮುಂದಿನ ಗುರಿಯಾಗಿದೆ.
ಏಷ್ಯಾಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿರಾಜ್‌ರನ್ನು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಕೈಬಿಟ್ಟಿರುವುದು ಅನೇಕ ಮಾಜಿ ಕ್ರಿಕೆಟಿಗರಿಗೆ ಅಚ್ಚರಿ ಮೂಡಿಸಿದೆ. ಏಕದಿನ ಮಾದರಿಯಲ್ಲಿ ಸಿರಾಜ್ ಉತ್ತಮ ಬೌಲರ್ ಆಗಿದ್ದಾರೆ ಅಂತಹ ಆಟಗಾರರನ್ನು ತಂಡದಿಂದ ಹೊರಗಿಟ್ಟಿದ್ದು ಸರಿಯಲ್ಲ ಎಂದು ಅನೇಕುರ ಹೇಳಿದ್ದಾರೆ.
ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್‌ನೆಸ್ ಬಗ್ಗೆ ಯಾವುದೇ ಖಚಿತತೆ ಇಲ್ಲದಿದ್ದಾ ಮೊಹಮ್ಮದ್ ಸಿರಾಜ್‌ರನ್ನು ಬ್ಯಾಕಪ್ ಬೌಲರ್ ಆಗಿ ಆಯ್ಕೆ ಮಾಡಬೇಕಿತ್ತು ಎಂದು ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಹೇಳಿದ್ದಾರೆ.












Click it and Unblock the Notifications