IPL 2025: ರೋಹಿತ್ ಶರ್ಮಾಗೆ ತಿರುಗೇಟು ಕೊಟ್ಟು ಕೊಹ್ಲಿಯನ್ನು ಹೊಗಳಿದ ಸಿರಾಜ್
ಹಲವು ವರ್ಷಗಳಿಂದ ಆರ್ ಸಿಬಿ ತಂಡಕ್ಕಾಗಿ ಆಡಿದ್ದ ಮೊಹಮ್ಮದ್ ಸಿರಾಜ್ ಈ ಬಾರಿ ಗುಜರಾತ್ ಟೈಟಾನ್ಸ್‌ಗಾಗಿ ಆಡಲಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಬಳಿಕ ಮೊಹಮ್ಮದ್ ಸಿರಾಜ್‌ರನ್ನು ಭಾರತ ತಂಡದಿಂದಲೇ ಕೈಬಿಡಲಾಗಿದೆ. ಟಿ20 ಮಾದರಿಯಲ್ಲಿ ಸಿರಾಜ್ ಉತ್ತಮ ಅಂಕಿಅಂಶ ಹೊಂದಿಲ್ಲದೇ ಇದ್ದರೂ, ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಭಾರತ ತಂಡಕ್ಕಾಗಿ ಆಡುವ ವಿಶ್ವಾಸದಲ್ಲಿದ್ದ ಸಿರಾಜ್‌ಗೆ ಬಿಸಿಸಿಐ ಆಡಳಿತ ಮಂಡಳಿ ಶಾಕ್ ಕೊಟ್ಟಿತ್ತು. ಮೊಹಮ್ಮದ್ ಸಿರಾಜ್‌ರನ್ನು ಕೈಬಿಟ್ಟ ಬಗ್ಗೆ ಮಾತನಾಡಿದ್ದ ರೋಹಿತ್ ಶರ್ಮಾ ಅವರು ಹಳೆಯ ಚೆಂಡಿನಲ್ಲಿ ಉತ್ತಮ ಪ್ರದರ್ಶನ ನೀಡಲ್ಲ ಎಂದು ಹೇಳಿದ್ದರು.

ಈ ಕಾರಣದಿಂದಲೇ ಮೊಹಮ್ಮದ್ ಸಿರಾಜ್ ಬದಲಾಗಿ ಹರ್ಷಿತ್ ರಾಣಾ ಮತ್ತು ಅರ್ಶದೀಪ್ ಸಿಂಗ್‌ರನ್ನು ಅವರನ್ನು ಆಯ್ಕೆ ಮಾಡಿದ್ದಾಗಿ ನಾಯಕ ರೋಹಿತ್ ಶರ್ಮಾ ಹೇಳಿದ್ದರು. ಮೊಹಮ್ಮದ್ ಸಿರಾಜ್ ಇದೀಗ ರೋಹಿತ್ ಶರ್ಮಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೊಹಮ್ಮದ್ ಸಿರಾಜ್ ಹೇಳಿದ್ದೇನು?
ರೋಹಿತ್ ಶರ್ಮಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮೊಹಮ್ಮದ್ ಸಿರಾಜ್, ಅಂಕಿಅಂಶಗಳೊಂದಿಗೆ ತಿರುಗೇಟು ಕೊಟ್ಟಿದ್ದಾರೆ, ಕಳೆದ ವರ್ಷ ವಿಶ್ವದ ಹತ್ತು ವೇಗದ ಬೌಲರ್‌ಗಳಲ್ಲಿ ನಾನು ಹಳೆಯ ಚೆಂಡಿನಲ್ಲೇ ಅತಿ ಹೆಚ್ಚು ವಿಕೆಟ್ ಪಡೆದಿದ್ದೇನೆ. ನನ್ನ ಎಕಾನಮಿ ದರವೂ ಕಡಿಮೆ ಇದೆ. ಸಂಖ್ಯೆಗಳು ಇದನ್ನು ಹೇಳುತ್ತವೆ. ಹೊಸ ಮತ್ತು ಹಳೆಯ ಚೆಂಡಿನಲ್ಲೂ ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಋತುವಿನ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಚಾಂಪಿಯನ್ಸ್ ಟ್ರೋಫಿ ತಂಡ ಪ್ರಕಟಿಸುವ ಮುನ್ನ ಮೊಹಮ್ಮದ್ ಸಿರಾಜ್ ಫಾರ್ಮ್‌ನಲ್ಲಿ ಇರಲಿಲ್ಲ. ಆರು ತಿಂಗಳಿನಲ್ಲಿ ಫಾರ್ಮ್ ಕುಸಿದಿದ್ದು, ಆದರೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಚಾಂಪಿಯನ್ಸ್ ಟ್ರೋಫಿ ತಂಡವನ್ನು ಘೋಷಿಸಿದಾಗ ರೋಹಿತ್, ಸಿರಾಜ್‌ರನ್ನು ಹೊರಗಿಡುವುದನ್ನು ಬಿಟ್ಟು ತಂಡಕ್ಕೆ ಬೇರೆ ದಾರಿಯಿಲ್ಲ ಎಂದು ಹೇಳಿದರು.
ತಂಡದಿಂದ ಹೊರಗಿಟ್ಟಿರುವ ಬಗ್ಗೆ ಮಾತನಾಡಿದ ಅವರು ಆಯ್ಕೆ ನನ್ನ ಕೈಯಲ್ಲಿಲ್ಲ, ಆದರೆ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಮತ್ತೆ ತಂಡಕ್ಕೆ ಸೇರಲು ಪ್ರಯತ್ನ ಮಾಡುತ್ತೇನೆ ಎಂದು ಸಿರಾಜ್ ಹೇಳಿದ್ದಾರೆ. "ಆಯ್ಕೆ ನನ್ನ ಕೈಯಲ್ಲಿಲ್ಲ, ನನ್ನ ಕೈಯಲ್ಲಿ ಚೆಂಡು ಮಾತ್ರ ಇದೆ, ಅದರೊಂದಿಗೆ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ಅದನ್ನೇ ಯೋಚನೆ ಮಾಡುತ್ತಾ ಒತ್ತಡಕ್ಕೆ ಒಳಗಾಗಲ್ಲ, ನನ್ನ ಪ್ರದರ್ಶನದ ಮೇಲೆ ಗಮನ ನೀಡಬೇಕು" ಎಂದು ಹೇಳಿದ್ದಾರೆ.
ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸುತ್ತೇನೆ. ಗುಜರಾತ್ ಟೈಟಾನ್ಸ್‌ಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಅವರು ಮತ್ತೊಂದು ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡುವತ್ತ ಗಮನಹರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ಹೇಳಿದ್ದೇನು?
2018 ಮತ್ತು 2019 ರಲ್ಲಿ ತಾನು ಕಳಪೆ ಫಾರ್ಮ್‌ನಲ್ಲಿದ್ದಾಗ ವಿರಾಟ್ ಕೊಹ್ಲಿ ನನಗೆ ಬೆಂಬಲ ನೀಡಿದ್ದರು ಎಂದು ನೆನಪಿಸಿಕೊಂಡು ಭಾವುಕರಾಗಿದ್ದಾರೆ. 2025ರ ಮೆಗಾ ಹರಾಜಿನಲ್ಲಿ ಆರ್ ಸಿಬಿ ತಮ್ಮನ್ನು ಖರೀದಿ ಮಾಡದೇ ಇರುವುದು ಬೇಸರವಾಗಿತ್ತು ಎಂದು ಮೊಹಮ್ಮದ್ ಸಿರಾಜ್ ಒಪ್ಪಿಕೊಂಡಿದ್ದಾರೆ.
"ನಿಜ ಹೇಳಬೇಕೆಂದರೆ, ವಿರಾಟ್ ಕೊಹ್ಲಿ ನನ್ನ ವೃತ್ತಿಜೀವನದಲ್ಲಿ ದೊಡ್ಡ ಪಾತ್ರ ಹೊಂದಿದ್ದಾರೆ. ಅವರು 2018 ಮತ್ತು 2019 ರಲ್ಲಿ ನನ್ನ ಕೆಟ್ಟ ಸಮಯದಲ್ಲಿ ನನ್ನನ್ನು ಬೆಂಬಲಿಸಿದರು, ನನ್ನನ್ನು ಬೆಂಬಲಿಸಿದರು, ಅವರು ನನ್ನನ್ನು ಉಳಿಸಿಕೊಂಡರು ಮತ್ತು ಅದರ ನಂತರ, ನನ್ನ ಪ್ರದರ್ಶನ ಮತ್ತು ಗ್ರಾಫ್ ಏರಿತು" ಎಂದು ಎಎನ್‌ಐಗೆ ತಿಳಿಸಿದ್ದಾರೆ.












Click it and Unblock the Notifications