MI vs PBKS: 250 ಸಿಕ್ಸರ್ ಐಪಿಎಲ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ರೋಹಿತ್ ಶರ್ಮಾ
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. ಶನಿವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 250ನೇ ಐಪಿಎಲ್ ಸಿಕ್ಸರ್ ಸಿಡಿಸಿದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3ನೇ ಸಿಕ್ಸರ್ ಸಿಡಿಸಿದ ಸಂದರ್ಭದಲ್ಲಿ ರೋಹಿತ್ ಶರ್ಮಾ ಈ ವಿಶೇಷ ಸಾಧನೆ ಮಾಡಿದ್ದಾರೆ. ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ 3ನೇ ಆಟಗಾರ ಎನಿಸಿಕೊಂಡಿದ್ದಾರೆ ರೋಹಿತ್ ಶರ್ಮಾ. ಇದಕ್ಕೂ ಮುನ್ನ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಈ ಸಾಧನೆ ಮಾಡಿದ್ದಾರೆ.

ರೋಹಿತ್ ಶರ್ಮಾ 2013ರ ಐಪಿಎಲ್ ಆವೃತ್ತಿಯಲ್ಲಿ ಅತ್ಯಂತ ಹೆಚ್ಚು ಸಿಕ್ಸರ್ ಬಾರಿದಿದ್ದರು. 19 ಇನ್ನಿಂಗ್ಸ್‌ಗಳಲ್ಲಿ ಅವರು 28 ಸಿಕ್ಸರ್ ಸಿಡಿಸಿದ್ದರು. ಈ ಪಂದ್ಯದಲ್ಲಿ 2ನೇ ಸಿಕ್ಸರ್ ಸಿಡಿಸಿದ ಸಂದರ್ಭದಲ್ಲಿ ರೋಹಿತ್ ಶರ್ಮಾ ನಾಯಕನಾಗಿ 150 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದು ಈ ಸಾಧನೆ ಮಾಡಿದ ಕೇವಲ ಮೂರನೇ ಐಪಿಎಲ್ ನಾಯಕ ಎನಿಸಿಕೊಂಡಿದ್ದಾರೆ. ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ನಾಯಕನಾಗಿ 150ಕ್ಕಿಂತ ಹೆಚ್ಚು ಸಿಕ್ಸರ್ ಸಿಡಿಸಿದ ಉಳಿದ ಇಬ್ಬರು ಕ್ರಿಕೆಟಿಗರು.
ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿ
357 - ಕ್ರಿಸ್ ಗೇಲ್ (141 ಇನ್ನಿಂಗ್ಸ್)
251 - ಎಬಿ ಡಿವಿಲಿಯರ್ಸ್ (170 ಇನ್ನಿಂಗ್ಸ್)
250* - ರೋಹಿತ್ ಶರ್ಮಾ (228 ಇನ್ನಿಂಗ್ಸ್)
235 - ಎಂಎಸ್ ಧೋನಿ (210 ಇನ್ನಿಂಗ್ಸ್)
229 - ವಿರಾಟ್ ಕೊಹ್ಲಿ (221 ಇನ್ನಿಂಗ್ಸ್)
223 - ಕೀರನ್ ಪೊಲಾರ್ಡ್ (171 ಇನ್ನಿಂಗ್ಸ್)
216 - ಡೇವಿಡ್ ವಾರ್ನರ್ (168 ಇನ್ನಿಂಗ್ಸ್)
203 - ಸುರೇಶ್ ರೈನಾ (200 ಇನ್ನಿಂಗ್ಸ್)
ಇನ್ನು ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಟಾಸ್ ಗೆದ್ದು ಮೊದಲಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭದಲ್ಲಿ ಸಾಧಾರಣ ಪ್ರದರ್ಶನ ನೀಡಿದರೂ ಪಂಜಾಬ್ ಕಿಂಗ್ಸ್ ದಾಂಡಿಗರು ಅಂತಿಮ ಹಂತದಲ್ಲಿ ಅಬ್ಬರಿಸಿದರು. ಇದರ ಪರಿಣಾಮವಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಗುರಿಯನ್ನು ಪಿಬಿಕೆಎಸ್ ನಿಗದಿಪಡಿಸಿದೆ.
ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಈ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದು ಹಂಗಾಮಿ ನಾಯಕ ಸ್ಯಾಮ್ ಕರನ್. 29 ಎಸೆತಗಳಲ್ಲಿ 55 ರನ್ ಬಾರಿಸಿದ ಸ್ಯಾಮ್ ಕರನ್ ತಂಡ ದೊಡ್ಡ ಮೊತ್ತದತ್ತ ದಾಪುಗಾಲಿಕ್ಕಲು ಕಾರಣವಾದರು. ಹರ್‌ಪ್ರೀತ್ ಸಿಂಗ್ ಭಾಟಿಯಾ 28 ಎಸೆತಗಳಲ್ಲಿ 41 ರನ್ ಬಾರಿಸಿದರೆ ಜಿತೇಶ್ ಶರ್ಮಾ ಕೇವಲ 7 ಎಸೆತಗಳಲ್ಲಿ 25 ರನ್ ಬಾರಿಸಿ ಅಬ್ಬರಿಸಿದರು.
ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕೊನೆಯ ಆರು ಓವರ್‌ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿಕೊಂಡಿತು. ಮೊದಲ 14 ಓವರ್‌ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ 105 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಮುಂಬೈನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಪಂಜಾಬ್ ಸುಲಭ ಗುರಿಯನ್ನು ಮುಂದಿಡಲಿದೆ ಎಂದೇ ಬಹುತೇಕ ಅಭಿಮಾನಿಗಳು ಭಾವಿಸಿದ್ದರು. ಆದರೆ ಕೊನೆಯ ಆರು ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ಬರೊಬ್ಬರಿ 109 ರನ್‌ಗಳನ್ನು ಕಲೆಹಾಕಿದೆ. ಅರ್ಜುನ್ ತೆಂಡೂಲ್ಕರ್ ಎಸೆತ 16ನೇ ಓವರ್‌ನಲ್ಲಿ 31 ರನ್ ಹರಿದು ಬಂದಿದ್ದರೆ ಕ್ಯಾಮರೂನ್ ಗ್ರೀನ್ ಎಸೆದ 18ನೇ ಓವರ್‌ನಲ್ಲಿ 25 ರನ್ ಹರಿದು ಬಂದಿತ್ತು.












Click it and Unblock the Notifications