MI vs DC: ಗೆಲ್ಲಲೇಬೇಕಾದ ಒತ್ತಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್; ನಿರ್ಣಾಯಕ ಪಂದ್ಯಕ್ಕೆ ಮುನ್ನ ಗಾಯಗೊಂಡ ಕೆಎಲ್ ರಾಹುಲ್
ಐಪಿಎಲ್ 2025ರ ಆವೃತ್ತಿಯ ಆರಂಭದಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬಳಿಕ ದಾರಿಯನ್ನು ಕಳೆದುಕೊಂಡಿತು. ಮೊದಲ ಆರು ಪಂದ್ಯದಲ್ಲಿ 5 ಪಂದ್ಯ ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬಳಿಕ 5 ಪಂದ್ಯದಲ್ಲಿ ಕೇವಲ 1 ಪಂದ್ಯ ಮಾತ್ರ ಗೆದ್ದಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಸದ್ಯ 12 ಪಂದ್ಯಗಳಲ್ಲಿ 13 ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಪ್ರವೇಶಿಸಲು ಉಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಬುಧವಾರ ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋತರೆ ಪ್ಲೇಆಫ್ ರೇಸ್‌ನಿಂದ ಹೊರಬೀಳಲಿದ್ದು ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೆ ಪ್ರವೇಶ ಪಡೆಯಲಿದೆ. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ಪ್ಲೇಆಫ್ ಆಸೆ ಜೀವಂತವಾಗಿರಲಿದೆ.

ಗಾಯಗೊಂಡ ಕೆಎಲ್ ರಾಹುಲ್!
ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯಕ್ಕೆ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್ ಕೆಎಲ್ ರಾಹುಲ್ ಮೊಣಕಾಲು ಗಾಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಅವರು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಾರಾ ಇಲ್ಲವಾ ಎನ್ನುವ ಬಗ್ಗೆ ತಂಡದಿಂದ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ತಂಡದ ಪ್ರಮುಖ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಈಗ ಫಾರ್ಮ್ ಕಳೆದುಕೊಂಡಿದ್ದಾರೆ. ಕರುಣ್ ನಾಯರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇಲ್ಲ, ಡಿಸಿ ತಂಡದ ಪ್ರಮುಖ ಬ್ಯಾಟರ್ ಆಗಿರುವ ರಾಹುಲ್ ಕೂಡ ಡೂ-ಆರ್-ಡೈ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮುನ್ನಾದಿನದಂದು ನೆಟ್ಸ್‌ನಲ್ಲಿ ಆಡುವ ಸಂದರ್ಭದಲ್ಲಿ ಮುಖೇಶ್ ಕುಮಾರ್ ಎಸೆತ ಎದುರಿಸುವಾಗ ರಾಹುಲ್ ಅವರ ಮೊಣಕಾಲಿಗೆ ಪೆಟ್ಟು ಬಿದ್ದಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಆಸರೆಯಾಗಿ ನಿಂತಿದ್ದ ಕೆಎಲ್ ರಾಹುಲ್ ಶತಕ ಬಾರಿಸಿದ್ದರು. ಆದರೆ ತಂಡವು ಗೆಲುವು ಸಾಧಿಸುವಲ್ಲಿ ವಿಫಲವಾಯಿತು.
ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಕೆಎಲ್ ರಾಹುಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಸಮೀರ್ ರಿಜ್ವಿ, ಅಕ್ಸರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಕುಲದೀಪ್ ಯಾದವ್, ಟಿ ನಟರಾಜನ್, ಮುಸ್ತಫಿಜುರ್ ರೆಹಮಾನ್, ದುಷ್ಮಂತ ಚಮೀರಾ.
ಮುಂಬೈ ಇಂಡಿಯನ್ಸ್: ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಕಾರ್ಬಿನ್ ಬಾಷ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಕರಣ್ ಶರ್ಮಾ.












Click it and Unblock the Notifications