Mayank Agarwal: ಕರ್ನಾಟಕ ಕ್ರಿಕೆಟಿಗ ಮಯಾಂಕ್ ಅಗರ್ವಾಲ್‌ಗೆ ಐಸಿಯುನಲ್ಲಿ ಚಿಕಿತ್ಸೆ
ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಅಗರ್ತಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಅಗರ್ತಲಾದಿಂದ ಸೂರತ್‌ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಅಗರ್ವಾಲ್ ಆರೋಗ್ಯ ಏರುಪೇರಾಗಿದ್ದು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರು ಕುಡಿದ ನಂತರ ಬಾಯಿ ಮತ್ತು ಗಂಟಲು ಸುಟ್ಟ ಅನುಭವವಾದ ಕಾರಣ ಅವರನ್ನು ಕೂಡಲೇ ಅಗರ್ತಲಾದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಅಗರ್ತಾಲದಲ್ಲಿ ರಣಜಿ ಟ್ರೋಫಿ ಪಂದ್ಯದಲ್ಲಿ ತ್ರಿಪುರಾ ವಿರುದ್ಧ 29 ರನ್‌ಗಳ ಗೆಲುವು ಸಾಧಿಸಿದ್ದ ಕರ್ನಾಟಕ ಮುಂದಿನ ಪಂದ್ಯದಲ್ಲಿ ರೈಲ್ವೇಸ್ ತಂಡವನ್ನು ಎದುರಿಸಲು ಸೂರತ್‌ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ತ್ರಿಪುರಾ ವಿರುದ್ಧ ಕರ್ನಾಟಕ 29 ರನ್‌ಗಳ ಜಯ ಗಳಿಸುವಲ್ಲಿ ಮಯಾಂಕ್ ಅಗರ್ವಾಲ್ ಪ್ರಮುಖ ಪಾತ್ರ ವಹಿಸಿದ್ದರು.
ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದೇ ಇದ್ದರೂ, ಮಯಾಂಕ್ ಅಗರ್ವಾಲ್ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಮಯಾಂಕ್ ಟಿ20 ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಕಾಯುತ್ತಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ, ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಐಪಿಎಲ್ 2024 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಆಡಲಿದ್ದಾರೆ.
ನಾಳೆ ಆಸ್ಪತ್ರೆಯಿಂದ ಬಿಡುಗಡೆ
ಮಯಾಂಕ್ ಅಗರ್ವಾಲ್ ಸದ್ಯ ಅಪಾಯದಿಂದ ಪಾರಾಗಿದ್ದು, ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಹೇಳಿರುವುದಾಗಿ ಕ್ರಿಕ್‌ಬಜ್ ವರದಿ ಮಾಡಿದೆ.
ಅಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಯಾಂಕ್ ಅಗರ್ವಾಲ್ ಬೆಂಗಳೂರಿಗೆ ಹಿಂತಿರುಗುವ ನಿರೀಕ್ಷೆಯಿದೆ ಮತ್ತು ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ ಅವರು ಮುಂದಿನ ಕ್ರಮವನ್ನು ನಿರ್ಧರಿಸಲಿದ್ದಾರೆ. ಶೀಘ್ರದಲ್ಲೇ ಅವರು ಮೈದಾನಕ್ಕೆ ಮರಳಲಿದ್ದಾರೆ ಎಂದು ಕೆಎಸ್ ಸಿಎ ವಿಶ್ವಾಸ ವ್ಯಕ್ತಪಡಿಸಿದೆ.
ಕರ್ನಾಟಕ ಮುಂದಿನ ಪಂದ್ಯದಲ್ಲಿ ರೈಲ್ವೇಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಮಯಾಂಕ್ ಅಗರ್ವಾಲ್ ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ಉಪನಾಯಕ ನಿಕಿಲ್ ಜೋಸ್ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ. ಮಯಾಂಕ್ ಬದಲಾಗಿ ದೇವದತ್ ಪಡಿಕ್ಕಲ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆಡುವ ಬಳಗದಲ್ಲಿ ಬದಲಾವಣೆಯಾಗಲಿದೆ.












Click it and Unblock the Notifications