RCB: ಎದುರಾಳಿಗಳಿಗೆ ವಾರ್ನಿಂಗ್ ಕೊಡುತ್ತಿರುವ ಆರ್‌ಸಿಬಿ ಆಲ್‌ರೌಂಡರ್!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ಆರ್ ಸಿಬಿ ತಂಡದ ಪಾಲಾಗಿರುವ ಕೃನಾಲ್ ಪಾಂಡ್ಯ ಚಿನ್ನಸ್ವಾಮಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹರಾಜಿನ ಬಳಿಕ ನಡೆದ ಶಿಬಿರದಲ್ಲಿ ಭಾಗವಹಿಸಿದ್ದ ಅವರು ಆರ್‌ಸಿಬಿ ಸೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು, ಕಪ್ ಗೆಲ್ಲುವುದು ನನಗೆ ಇಷ್ಟ, ಅದಕ್ಕಾಗಿ ನಾನು ಉತ್ತಮ ಪ್ರದರ್ಶನ ನೀಡುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಕೃನಾಲ್ ಪಾಂಡ್ಯ ಬರಿ ಮಾತಿಗಷ್ಟೇ ಭರವಸೆ ನೀಡಿಲ್ಲ ಎನ್ನುವುದು ಅವರ ಇತ್ತೀಚಿನ ಪ್ರದರ್ಶನ ನೋಡಿದರೆ ಅರ್ಥವಾಗುತ್ತದೆ. ಇತ್ತೀಚೆಗೆ ಮುಕ್ತಾಯವಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಈಗ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಲ್‌ರೌಂಡರ್ ಪ್ರದರ್ಶನ ನೀಡುತ್ತಿದ್ದು ಆರ್‌ಸಿಬಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಆಲ್‌ರೌಂಡ್ ಪ್ರದರ್ಶನ ನೀಡಿದ ನಾಯಕ
ಈಗ ನಡೆಯುತ್ತಿರುವ ಏಕದಿನ ಮಾದರಿಯ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕೃನಾಲ್ ಪಾಂಡ್ಯ ಬರೋಡಾ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಸೋಮವಾರ ನಡೆದ ಕೇರಳ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
54 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 80 ರನ್ ಸಿಡಿಸಿದ ಪಾಂಡ್ಯ ತಮ್ಮ ತಂಡ 50 ಓವರ್ ಗಳಲ್ಲಿ 403 ರನ್ ಗಳಿಸಲು ಮಹತ್ವದ ಕೊಡುಗೆ ನೀಡಿದರು. ಬಳಿಕ 10 ಓವರ್ ಗಳಲ್ಲಿ 44 ರನ್ ಬಿಟ್ಟುಕೊಟ್ಟು ಪ್ರಮುಖ ಎರಡು ವಿಕೆಟ್ ಕೂಡ ಪಡೆದುಕೊಂಡರು. ಅವರ ಆಲ್‌ರೌಂಡ್ ಆಟದ ನೆರವಿನಿಂದ ಬರೋಡಾ ಕೇರಳ ವಿರುದ್ಧ 62 ರನ್‌ಗಳ ಭಾರಿ ಗೆಲುವು ಸಾಧಿಸಿತು.
ಕೃನಾಲ್ ಪಾಂಡ್ಯ ಆರ್ ಸಿಬಿ ತಂಡದ ಪ್ರಮುಖ ಅಸ್ತ್ರವಾಗುವ ಎಲ್ಲಾ ಸೂಚನೆ ಕೊಟ್ಟಿದ್ದಾರೆ. ಎಂತಹದೇ ಪಿಚ್‌ನಲ್ಲೂ ಎದುರಾಳಿ ಬ್ಯಾಟರ್ ಗಳನ್ನು ಕಟ್ಟಿಹಾಕುವ ಕ್ಷಮತೆ ಅವರಲ್ಲಿದೆ. ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿ ಕೂಡ ಮಿಂಚುತ್ತಿದ್ದಾರೆ. ಆರ್ ಸಿಬಿ ತಂಡದ ಫಿನಿಷರ್ ಆಗಿ ಕೂಡ ಆಡುವ ಸಾಮರ್ಥ್ಯ ಹೊಂದಿದ್ದಾರೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 5.75 ಕೋಟಿ ರೂಪಾಯಿ ನೀಡಿ ಆರ್ ಸಿಬಿ ಅವರನ್ನು ಖರೀದಿ ಮಾಡಿದೆ. ಆರ್ ಸಿಬಿ ಅಭಿಮಾನಿಗಳ ಬಗ್ಗೆ ಮಾತನಾಡಿರುವ ಕೃನಾಲ್ ಪಾಂಡ್ಯ, ಆರ್ ಸಿಬಿಗೆ ಅಭಿಮಾನಿಗಳೇ ದೊಡ್ಡ ಶಕ್ತಿ ಅಭಿಮಾನಿಗಳ ಮುಂದೆ ಉತ್ತಮ ಪ್ರದರ್ಶನ ನೀಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಅವರು ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಇದೇ ರೀತಿ ಪ್ರದರ್ಶನ ಮುಂದುವರೆಸಲಿ. ಐಪಿಎಲ್‌ನಲ್ಲಿ ಕೂಡ ಅವರು ಆರ್ ಸಿಬಿ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿ ತಂಡವು ಮೊದಲ ಬಾರಿ ಕಪ್ ಎತ್ತಿಹಿಡಿಯಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.












Click it and Unblock the Notifications