KL Rahul: ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡ ಕೆಎಲ್ ರಾಹುಲ್; ಎಸ್‌ಆರ್‌ಎಚ್ ವಿರುದ್ಧದ ಪಂದ್ಯಕ್ಕೆ ಸಿದ್ಧ
ಐಪಿಎಲ್ 2025ರ ತಮ್ಮ ಮೊದಲನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 1 ವಿಕೆಟ್‌ನಿಂದ ರೋಚಕ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲು ಸಜ್ಜಾಗಿದೆ. ಎರಡನೇ ಪಂದ್ಯಕ್ಕೆ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ತಂಡದ ಪ್ರಮುಖ ಬ್ಯಾಟರ್ ಕೆಎಲ್ ರಾಹುಲ್ ತಂಡವನ್ನು ಸೇರಿಕೊಂಡಿದ್ದಾರೆ.
ಮಾರ್ಚ್ 30ರಂದು ಭಾನುವಾರ ವಿಶಾಖಪಟ್ಟಣದ ಡಾ. ವೈ. ಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೆಣೆಸಲಿದೆ. ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ಕೆಎಲ್ ರಾಹುಲ್ ಎಲ್‌ಎಸ್‌ಜಿ ವಿರುದ್ಧದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಮಾರ್ಚ್ 24ರಂದು ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಪಂದ್ಯ ಆಡಿದ ದಿನವೇ, ಕೆಎಲ್ ರಾಹುಲ್ - ಅತಿಯಾ ಶೆಟ್ಟಿ ದಂಪತಿಗೆ ಹೆಣ್ಣುಮಗು ಜನಿಸಿತ್ತು.

ಹೆಣ್ಣು ಮಗುವಿನ ತಂದೆಯಾದ ಖುಷಿಯಲ್ಲಿರುವ ಕೆಎಲ್ ರಾಹುಲ್ ಪತ್ನಿ, ಮಗುವಿನ ಜೊತೆ ಹಲವು ದಿನ ಕಳೆದ ಬಳಿಕ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೆಎಲ್ ರಾಹುಲ್ ತಂಡವನ್ನು ಸೇರಿಕೊಂಡಿರುವ ವಿಡಿಯೋ ಹಂಚಿಕೊಂಡಿದೆ.
ವಿಡಿಯೋದಲ್ಲಿ ಓಂ ಶಾಂತಿ ಓಂ ಚಿತ್ರದ ಪ್ರಸಿದ್ಧ ಶಾರುಖ್ ಖಾನ್ ಸಂಭಾಷಣೆಗಳು ಮತ್ತು ದೆಹಲಿ ಅಭಿಮಾನಿಗಳು ಉತ್ಸಾಹದಿಂದ ರಾಹುಲ್‌ಗೆ ಕ್ಯಾಪ್ ಮತ್ತು ಬ್ಯಾಟ್ ಅನ್ನು ಹಸ್ತಾಂತರಿಸುವುದನ್ನು ಮತ್ತು ತಂಡದ ಧ್ವಜವನ್ನು ಹಿಡಿಯುವುದನ್ನು ನೋಡಬಹುದು. ನಾನು ಮನೆಗೆ ಬಂದಿದ್ದೇನೆ ಎಂದು ರಾಹುಲ್ ಹೇಳುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡಿದ್ದನ್ನು ಘೋಷಿಸಿದ್ದಾರೆ.
ಮೂರು ವರ್ಷ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ 2025ರ ಮೆಗಾ ಹರಾಜಿಗೆ ಮುನ್ನ ತಂಡದಿಂದ ಹೊರಗೆ ಬಂದಿದ್ದರು. ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೆಎಲ್ ರಾಹುಲ್‌ರನ್ನು 14 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.
ಡೆಲ್ಲಿ ಪರ ಮೊದಲ ಪಂದ್ಯ ಆಡಲು ಸಜ್ಜು
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಪಂದ್ಯ ಆಡಲು ಕೆಎಲ್ ರಾಹುಲ್ ಸಜ್ಜಾಗಿದ್ದಾರೆ. ಭಾನುವಾರ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್‌ನಲ್ಲೂ ಅದೇ ಆಟವನ್ನು ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.
ಕೆಎಲ್ ರಾಹುಲ್ ಅವರೇ ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅದರೆ ಕೆಎಲ್ ರಾಹುಲ್ ನಾಯಕತ್ವದ ಜವಾಬ್ದಾರಿ ನಿರಾಕರಿಸಿದ್ದು, ಬ್ಯಾಟರ್ ಆಗಿ ತಂಡದ ಗೆಲುವಿಗೆ ಕೊಡುಗೆ ನೀಡುವತ್ತ ಗಮನ ಹರಿಸಲಿದ್ದಾರೆ. ಎಸ್‌ಆರ್ ಎಚ್ ವಿರುದ್ಧದ ಪಂದ್ಯದಲ್ಲಿ ಅವರು ಆರಂಭಿಕರಾಗಿ ಕಣಕ್ಕಿಳಿಯುತ್ತಾರಾ ಅಥವಾ ಫಿನಿಶರ್ ಪಾತ್ರ ನಿಭಾಯಿಸುತ್ತಾರಾ ಎಂದು ನೋಡಬೇಕಿದೆ.












Click it and Unblock the Notifications