Ranji Trophy: ಕೆಎಲ್ ರಾಹುಲ್ ವಿಫಲ; ರಾಜ್ಯಕ್ಕೆ ಮಯಾಂಕ್, ಪಡಿಕ್ಕಲ್ ಆಸರೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನ ಸುಸ್ಥಿತಿಯಲ್ಲಿದೆ. ಐದು ವರ್ಷಗಳ ಬಳಿಕ ರಣಜಿ ಆಡಲು ಕರ್ನಾಟಕ ತಂಡಕ್ಕೆ ಮರಳಿದ ಕೆಎಲ್ ರಾಹುಲ್ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಗಿದ್ದಾರೆ. ಗುರುವಾರದಿಂದ ಆರಂಭವಾಗಿರುವ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಮೊದಲ ಇನ್ನಿಂಗ್ಸ್‌ನಲ್ಲಿ 26 ರನ್ ಗಳಿಸಿ ಔಟಾಗಿದ್ದಾರೆ.
ಟಾಸ್ ಗೆದ್ದ ಹರಿಯಾಣ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಸಾಧಾರಣ ಆರಂಭ ಪಡೆಯಿತು. ಅನೀಶ್ ಕೆವಿ 67 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. 45 ರನ್ ಗಳಿಸಿದ್ದಾಗಲೇ ಕರ್ನಾಟಕ ಮೊದಲ ವಿಕೆಟ್ ಕಳೆದುಕೊಂಡಿತು.

ಅನೀಶ್ ಔಟಾದ ಬಳಿಕ ಕೆಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ನಾಯಕ ಮಯಾಂಕ್ ಅಗರ್ವಾಲ್ ಜೊತೆಗೂಡಿದ ಅವರು ಎರಡನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ನಡೆಸಿದರು. 37 ಎಸೆತಗಳಲ್ಲಿ 4 ಬೌಂಡರಿ ಸಹಿತ 26 ರನ್ ಗಳಿಸಿ ಲಯದಲ್ಲಿದ್ದ ಅವರು ಅನುಶ್ ಕಾಂಬೋಜ್ ಬೌಲಿಂಗ್‌ನಲ್ಲಿ ಆರ್ ಪಿ ಶರ್ಮಾ ಅವರಿಗೆ ಕ್ಯಾಚ್ ಕೊಟ್ಟು ಔಟಾದರು.
ಮಯಾಂಕ್, ಪಡಿಕ್ಕಲ್ ಆಸರೆ
ಬಳಿಕ ಜೊತೆಯಾದ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಮೂರನೇ ವಿಕೆಟ್‌ಗೆ 62 ರನ್‌ಗಳನ್ನು ಕಲೆಹಾಕಿದರು. 149 ಎಸೆತಗಳಲ್ಲಿ 8 ಬೌಂಡರಿ 3 ಸಿಕ್ಸರ್ ಸಹಿತ 91 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್ ಔಟಾಗುವ ಮೂಲಕ ಶತಕದಿಂದ ವಂಚಿತರಾದರು. ದೇವದತ್ ಪಡಿಕ್ಕಲ್ 93 ಎಸೆತಗಳಲ್ಲಿ 43 ರನ್ ಗಳಿಸಿದರು.
ಕಳೆದ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸುವ ಮೂಲಕ ಮಿಂಚಿದ್ದ ಸ್ಮರಣ್ ರವಿಚಂದ್ರನ್ 35 ರನ್ ಗಳಿಸಿ ಔಟಾದರು. ಕೆಎಲ್ ಶ್ರೀಜಿತ್ ಅಜೇಯ 18 ರನ್ ಗಳಿಸಿದ್ದರೆ, ಯಶೋವರ್ಧನ್ ಪರಂತಾಪ್ ಅಜೇಯ 27 ರನ್ ಗಳಿಸಿದ್ದು ಎರಡನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 267 ರನ್ ಗಳಿಸಿದ್ದು ದೊಡ್ಡ ಮೊತ್ತ ಕಲೆಹಾಕುವ ವಿಶ್ವಾಸದಲ್ಲಿದೆ.
ಮತ್ತೊಂದು ಕಡೆ ಕೇರಳ ಬಿಹಾರದ ವಿರುದ್ದ ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 302 ರನ್ ಗಳಿಸಿದೆ. ಕೇರಳ ಬಿಹಾರದ ವಿರುದ್ಧ ಗೆದ್ದರೆ ಕರ್ನಾಟಕದ ಕ್ವಾರ್ಟರ್ ಫೈನಲ್ ತಲುಪುವ ಅವಕಾಶ ಕೈತಪ್ಪಲಿದೆ. ಕೇರಳ ಬಿಹಾರ ನಡುವಿನ ಪಂದ್ಯ ಡ್ರಾಗೊಂಡು ಕರ್ನಾಟಕ ಏನಾದರೂ ಹರಿಯಾಣ ವಿರುದ್ಧ ದೊಡ್ಡ ಗೆಲುವು ಸಾಧಿಸಿದರೆ ಬೋನಸ್ ಪಾಯಿಂಟ್ ಸಹಿತ ಎರಡನೇ ಸ್ಥಾನಕ್ಕೆ ಬಂದರೆ ಮಾತ್ರ ಕ್ವಾರ್ಟರ್ ಫೈನಲ್‌ಗೆ ತಲುಪಬಹುದು.












Click it and Unblock the Notifications