KKR vs SRH: ಚೆನ್ನೈನಲ್ಲಿ ಕಪ್ ಗೆಲ್ಲೋದ್ಯಾರು? ಪ್ಲೇಯಿಂಗ್ 11, ಪಿಚ್ ವರದಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಆವೃತ್ತಿ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಪ್ಲೇಆಫ್‌ಗೆ ಬಂದಿದ್ದ ಕೆಕೆಆರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಫೈನಲ್ ತಲುಪಿದ್ದು, ಭಾನುವಾರ ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣೆಸಲಿವೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಈ ಬಾರಿ ಫೈನಲ್ ಪಂದ್ಯ ನಡೆಯಲಿದ್ದು, ಬಲಿಷ್ಠ ತಂಡಗಳು ರೋಚಕ ಕಾದಾಟಕ್ಕೆ ಸಜ್ಜಾಗುತ್ತಿವೆ. ಕ್ವಾಲಿಫೈಯರ್ 1 ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮಣಿಸಿದ್ದ ಕೆಕೆಆರ್ ನೇರವಾಗಿ ಫೈನಲ್ ತಲುಪಿತ್ತು.

ಶುಕ್ರವಾರ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 36 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಸನ್‌ರೈಸರ್ಸ್ ಹೈದರಾಬಾದ್ ಫೈನಲ್ ಪ್ರವೇಶಿಸಿದ್ದು, ಕೆಕೆಆರ್ ವಿರುದ್ಧ ಕ್ವಾಲಿಫೈಯರ್ ಸೋಲಿನ ಸೇಡು ತೀರಿಸಿಕೊಂಡು, ಪ್ರಶಸ್ತಿ ಎತ್ತಿಹಿಡಿಯಲು ಸಜ್ಜಾಗಿದೆ.
ಕೆಕೆಆರ್ 2 ಬಾರಿ ಪ್ರಶಸ್ತಿ ಗೆದ್ದಿದ್ದು ಮೂರನೇ ಬಾರಿ ಕಪ್ ಎತ್ತಿಹಿಡಿಯುವ ಉತ್ಸಾಹದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ (ಡೆಕ್ಕನ್ ಚಾರ್ಜರ್ಸ್ ಆಗಿದ್ದಾಗ ಒಂದು ಬಾರಿ) ಒಟ್ಟು 2 ಬಾರಿ ಕಪ್ ಗೆದ್ದಿದೆ 2016ರಲ್ಲಿ ಅವರು ಕೊನೆಯ ಬಾರಿ ಕಪ್ ಗೆದ್ದಿದ್ದು, ಈಗ ಕಪ್ ಗೆಲ್ಲುವ ಉತ್ಸಾಹದಲ್ಲಿದೆ.
ಪಿಚ್ ವರದಿ
ಎಂಎ ಚಿದಂಬರಂ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಹಕಾರಿಯಾಗಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಸ್ಪಿನ್ನರ್ ಗಳಿಗೆ ಹೆಚ್ಚಿನ ಸಹಕಾರಿಯಾಗಿದ್ದನ್ನು ನೋಡಬಹುದು. ಆರಂಭದಲ್ಲಿ ವೇಗಿಗಳಿಗೆ ನೆರವು ಕೂಡ ಸಿಗಲಿದೆ. ಆದರೆ ತಾಳ್ಮೆಯಿಂದ ಆಡಿದರೆ ಇಲ್ಲಿ ರನ್ ಗಳಿಸಬಹುದು ಎಂದು ಹೆನ್ರಿಚ್ ಕ್ಲಾಸೆನ್ ತೋರಿಸಿಕೊಟ್ಟಿದ್ದಾರೆ.
ಉಭಯ ತಂಡಗಳ ಆಡುವ ಬಳಗ
ಉಭಯ ತಂಡಗಳು ಫೈನಲ್ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡಲು ಬಯಸುವುದಿಲ್ಲ, ಗೆದ್ದುಕೊಂಡು ಬಂದಿರುವ ತಂಡದ ಜೊತೆಯೇ ಕಣಕ್ಕಿಳಿಯಲಿವೆ.
ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್.
ಕೋಲ್ಕತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.












Click it and Unblock the Notifications