Vijay Hazare Trophy: ಸೆಮಿಫೈನಲ್‌ನಲ್ಲಿ ಕರ್ನಾಟಕದ ಎದುರಾಳಿ ಯಾರು? ಪಂದ್ಯದ ಸಮಯ, ನೇರಪ್ರಸಾರ ಮಾಹಿತಿ
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ಸೆಮಿಫೈನಲ್ ತಲುಪಿದ್ದು ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಬರೋಡಾ ವಿರುದ್ದ 5 ರನ್‌ಗಳ ರೋಚಕ ಗೆಲುವು ಸಾಧಿಸಿರುವ ಮಯಾಂಕ್ ಅಗರ್ವಾಲ್ ಪಡೆ, ಇದೀಗ ಸೆಮಿಫೈನಲ್‌ನಲ್ಲಿ ಹರಿಯಾಣವನ್ನು ಮಣಿಸಿ ಫೈನಲ್ ತಲುಪುಲ ಉತ್ಸಾಹದಲ್ಲಿದೆ.
ಕರ್ನಾಟಕ, ಹರಿಯಾಣ, ಮಹಾರಾಷ್ಟ್ರ ಮತ್ತು ವಿದರ್ಭ ತಂಡಗಳು ಸೆಮಿಫೈನಲ್ ತಲುಪಿವೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಹರಿಯಾಣ ಮುಖಾಮುಖಿಯಾಗಲಿದ್ದು, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ಮತ್ತು ಮಹಾರಾಷ್ಟ್ರ ಸೆಣೆಸಲಿವೆ.

ಕರ್ನಾಟಕ ಮತ್ತು ಹರಿಯಾಣ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ಜನವರಿ 15, ಬುಧವಾರದಂದು ನಡೆಯಲಿದೆ. ವಡೋದರಾದ ಕೊತಂಬಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ. ಸೆಮಿಫೈನಲ್ ಪಂದ್ಯದ ನೇರಪ್ರಸಾರವನ್ನು ಜಿಯೋ ಸಿನಿಮಾ ಅಪ್ಲಿಕೇಷನ್‌ನಲ್ಲಿ ನೋಡಬಹುದಾಗಿದೆ.
ಬಲಿಷ್ಠವಾಗಿದೆ ಕರ್ನಾಟಕ ತಂಡ
ಕರ್ನಾಟಕ ತಂಡ ಈ ಬಾರಿ ಪಂದ್ಯಾವಳಿಯಲ್ಲಿ ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡುತ್ತಲೇ ಬಂದಿದೆ. ಬ್ಯಾಟಿಂಗ್ ವಿಭಾಗದಲ್ಲಿ ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಅನೀಶ್, ಆರ್ ಸ್ಮರಣ್, ಅಭಿನವ್ ಮನೋಹರ್ ಉತ್ತಮ ಫಾರ್ಮ್‌ನಲ್ಲಿದೆ. ಪ್ರಸಿದ್ಧ್ ಕೃಷ್ಣ ತಂಡಕ್ಕೆ ವಾಪಸಾಗಿರುವುದು ಬೌಲಿಂಗ್ ವಿಭಾಗಕ್ಕೂ ಬಲ ತಂದುಕೊಟ್ಟಿದೆ. ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡದ ಗೆಲುವಿಗೆ ಸಹಕಾರಿಯಾಗಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯದಲ್ಲಿ ಆಡಿ ಉಳಿದ ಟೆಸ್ಟ್ ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ದೇವದತ್ ಪಡಿಕ್ಕಲ್, ಕರ್ನಾಟಕ ತಂಡಕ್ಕೆ ಮರಳಿದ್ದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಮಿಂಚಿದ್ದರು. ಸೆಮಿಫೈನಲ್‌ನಲ್ಲಿ ಕೂಡ ತಮ್ಮ ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ ಎಡಗೈ ಬ್ಯಾಟರ್.
ನಾಯಕ ಮಯಾಂಕ್ ಅಗರ್ವಾಲ್ ಈ ಪಂದ್ಯಾವಳಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈಗಾಗಲೇ ಪಂದ್ಯಾವಳಿಯಲ್ಲಿ ನಾಲ್ಕು ಶತಕ ಸಿಡಿಸಿರುವ ಮಯಾಂಕ್, ಸೆಮಿಫೈನಲ್‌ನಲ್ಲಿ ಅಬ್ಬರಿಸಿದರೆ ರಾಜ್ಯದ ಗೆಲುವು ಸುಲಭವಾಗಲಿದೆ.
ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಆಡುವ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಸೆಮಿಫೈನಲ್‌ನಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.
ಕರ್ನಾಟಕ: ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಅನೀಶ್ ಕೆವಿ, ಸ್ಮರಣ್ ರವಿಚಂದ್ರನ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಶ್ರೇಯಸ್ ಗೋಪಾಲ್, ಅಭಿಲಾಷ್ ಶೆಟ್ಟಿ, ವಾಸುಕಿ ಕೌಶಿಕ್, ಪ್ರಸಿದ್ಧ್ ಕೃಷ್ಣ.
ಹರಿಯಾಣ: ಅರ್ಶ್ ರಂಗ, ಹಿಮಾಂಶು ರಾಣಾ, ಅಂಕಿತ್ ಕುಮಾರ್ (ನಾಯಕ), ಪಾರ್ಥ್ ವಾಟ್ಸ್, ನಿಶಾಂತ್ ಸಿಂಧು, ರಾಹುಲ್ ತೆವಾಟಿಯಾ, ಸುಮಿತ್ ಕುಮಾರ್, ದಿನೇಶ್ ಬನಾ (ವಿಕೆಟ್ ಕೀಪರ್), ಅಂಶುಲ್ ಕಾಂಬೋಜ್, ಅಮಿತ್ ರಾಣಾ, ಅನುಜ್ ಥಕ್ರಾಲ್.












Click it and Unblock the Notifications