T20 World Cup: ಯುಎಸ್‌ಎ ತಂಡದಲ್ಲಿ ಮಿಂಚಲು ಸಜ್ಜಾದ ಚಿಕ್ಕಮಗಳೂರು ಹುಡುಗ!
ಜೂನ್ 2ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಬಹುತೇಕ ಎಲ್ಲಾ ದೇಶಗಳು ತಮ್ಮ ತಂಡವನ್ನು ಘೋಷಣೆ ಮಾಡಿವೆ. ಪಾಕಿಸ್ತಾನ ಮಾತ್ರ ತಂಡವನ್ನು ಘೋಷಿಸುವುದು ಬಾಕಿ ಇದೆ. ಭಾರತ ತಂಡವನ್ನು ಕೂಡ ಘೋಷಣೆ ಮಾಡಿದ್ದು, ಬೇಸರದ ಸಂಗತಿ ಎಂದರೆ ಈ ಬಾರಿ ಒಬ್ಬ ಕನ್ನಡಿಗನೂ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಭಾರತ ತಂಡದಲ್ಲಿ ಕನ್ನಡಿಗರಿಗೆ ಅವಕಾಶ ಇಲ್ಲದೇ ಇದ್ದರೂ, ಟಿ20 ವಿಶ್ವಕಪ್‌ನಲ್ಲಿ ಆಡಲು ಕನ್ನಡಿಗರಿಗೆ ಬೇರೆ ದೇಶದ ತಂಡಗಳು ಅವಕಾಶ ಕೊಟ್ಟಿವೆ. ಚಿಕ್ಕಮಗಳೂರಿನ ಹುಡುಗನೊಬ್ಬ ಈಗ ಯುಎಸ್‌ಎ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದು ವಿಶ್ವಕಪ್‌ನಲ್ಲಿ ಆಡಲು ಸಜ್ಜಾಗಿದ್ದಾರೆ.

ನೋಸ್ತುಶ್ ಪ್ರದೀಪ್ ಕೆಂಜಿಗೆ, ಯುಎಸ್‌ಎ ತಂಡದಲ್ಲಿ ಸ್ಥಾನ ಪಡೆದಿರುವ ಕನ್ನಡಿಗ ಕ್ರಿಕೆಟಿಗ. ಚಿಕ್ಕಮಗಳೂರಿನ ಕೆಂಜಿಗೆ ಗ್ರಾಮದ ಕ್ರಿಕೆಟಿಗರಾದ ಅವರು, 2019ರಲ್ಲಿ ಯುಎಸ್ಎ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
ಭಾರತದಲ್ಲಿ ಸಿಗದ ಅವಕಾಶ
ಎಡಗೈ ಸ್ಪಿನ್ನರ್ ಆಗಿರುವ ನೋಸ್ತುಶ್ ಪ್ರದೀಪ್ ಕೆಂಜಿಗೆ ಭಾರತ ತಂಡದಲ್ಲಿ ಆಡುವ ಆಸೆ ಹೊಂದಿದ್ದರು. ಆದರೆ ಇಲ್ಲಿ ಅವರಿಗೆ ಅವಕಾಶ ಸಿಗದ ಕಾರಣ, ವಿಭಿನ್ನ ದಾರಿಯನ್ನು ಆಯ್ಕೆ ಮಾಡಿಕೊಂಡರು.
2019 ರಲ್ಲಿ ಯುಎಸ್‌ಎ ತಂಡದ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಕಳೆದ ಒಂದು ದಶಕದಿಂದ ಕ್ರಿಕೆಟ್‌ನ ಪಾಠಗಳನ್ನು ಕಲಿತ ಅವರು, ವಿಶ್ವಕಪ್ ವೇದಿಕೆಯಲ್ಲಿ ಪ್ರದರ್ಶಿಸಲು ಸಜ್ಜಾಗಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೊದಲ ವಿಭಾಗದಲ್ಲಿ ಹಲವು ತಂಡಗಳಿಗೆ ಆಡಿರುವ ಅವರು, ಕ್ರಿಕೆಟ್ ಪಟ್ಟುಗಳನ್ನು ಕಲಿತರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದವರಾದ ನೊಸ್ತೂಶ್ ಈ ಹಿಂದೆ ಬೆಂಗಳೂರಿನಲ್ಲಿ ಕ್ಲಬ್ ಕ್ರಿಕೆಟ್ ಆಡಿದ್ದರು.
ಭಾರತೀಯ ಕ್ರಿಕೆಟ್ ತಂಡದಲ್ಲಿ ಅವಕಾಶಗಳ ಕೊರತೆಯಿಂದಾಗಿ, ಕೆಂಜಿಗೆಯ ಸ್ಥಳೀಯರು ಇದೀಗ ಯುಎಸ್ಎ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಜೂನ್ 12ರಂದು ನಡೆಯಲಿರುವ ಭಾರತ ಟಿ20 ಕ್ರಿಕೆಟ್ ತಂಡದ ವಿರುದ್ಧ ಅಮೆರಿಕದ ತಂಡದ ಪಂದ್ಯದಲ್ಲಿ ಆಡುವ ಉತ್ಸಾಹದಲ್ಲಿದ್ದಾರೆ.
— Avinash vokkaliga (@avinash70800305) May 10, 2024
ಆಶೀರ್ವಾದ ಮಾಡಿ ಎಂದ ಕೆಂಜಿಗೆ
ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಬೆನ್ನಲ್ಲೇ ವಿಡಿಯೋ ಮಾಡಿರುವ ಅವರು, ಕರ್ನಾಟಕ ಸ್ನೇಹಿತರಿಗೆ ನಮಸ್ಕಾರ, ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಳೆದಿದ್ದು, ಟಿ20 ವಿಶ್ವಕಪ್‌ನಲ್ಲಿ ಯುಎಸ್‌ಎ ತಂಡಕ್ಕಾಗಿ ಆಡುತ್ತಿದ್ದು ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications