Vijay Hazare Trophy: ಬರೋಡಾ ವಿರುದ್ಧ 5 ರನ್‌ಗಳ ರೋಚಕ ಗೆಲುವು; ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ಸೆಮಿಫೈನಲ್ ಪ್ರವೇಸಿದೆ. ಶನಿವಾರ ನಡೆದ ಬರೋಡಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 5 ರನ್‌ಗಳ ರೋಚಕ ಗೆಲುವು ಸಾಧಿಸಿದ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿದೆ. ಅಭಿಲಾಶ್ ಶೆಟ್ಟಿ ಕೊನೆಯ ಓವರ್ ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡುವ ಮೂಲಕ ರಾಜ್ಯಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಟಾಸ್ ಗೆದ್ದ ಬರೋಡಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 281 ರನ್ ಕಲೆಹಾಕಿತು. ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಬರೋಡಾ 49.5 ಓವರ್ ಗಳಲ್ಲಿ 276 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಸೋಲು ಕಂಡಿತು.

ದೇವದತ್ ಪಡಿಕ್ಕಲ್ ಅಮೋಘ ಶತಕ
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ದೇವದತ್ ಪಡಿಕ್ಕಲ್ ಶತಕ ಸಿಡಿಸುವ ಮೂಲಕ ಆಸರೆಯಾದರು. 99 ಎಸೆತಗಳಲ್ಲಿ 15 ಬೌಂಡರಿ 2 ಸಿಕ್ಸರ್ ಸಹಿತ 102 ರನ್ ಗಳಿಸಿ ಕರ್ನಾಟಕ ಸವಾಲಿನ ಮೊತ್ತ ಗಳಿಸಲು ನೆರವಾದರು. ಅನೀಶ್ ಕೆವಿ 52 ರನ್, ಸ್ಮರಣ್ ರವಿಚಂದ್ರನ್ 28 ರನ್, ಕೃಷ್ಣನ್ ಶ್ರೀಜಿತ್ 28 ರನ್ ಮತ್ತು ಅಭಿನವ್ ಮನೋಹರ್ 21 ರನ್ ಗಳಿಸಿದರು.
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಬರೋಡಾ ಕೂಡ ಉತ್ತಮ ಆರಂಭ ಪಡೆಯಿತು. ನಿನಾದ್ ರಾತ್ವ 14 ರನ್ ಗಳಿಸಿ ಔಟಾದ ಬಳಿಕ, ಶಾಶ್ವತ್ ರಾವತ್ ಮತ್ತು ಅತೀತ್ ಸೇಠ್ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್‌ಗೆ ಈ ಜೋಡಿ 99 ರನ್ ಕಲೆಹಾಕಿತು. ನಾಯಕ ಕೃನಾಲ್ ಪಾಂಡ್ಯ 30 ರನ್ ಗಳಿಸಿದರು. ಒಂದು ಹಂತದಲ್ಲಿ ಗೆಲುವಿನತ್ತ ಮುನ್ನಡೆಯುತ್ತಿದ್ದ ಬರೋಡಾ ತಂಡಕ್ಕೆ ಶ್ರೇಯಸ್ ಗೋಪಾಲ್ ಅಡ್ಡಿಯಾದರು.
ಅತೀತ್ ಸೇಠ್ ಮತ್ತು ವಿಷ್ಣು ಸೋಲಂಕಿ ವಿಕೆಟ್ ಪಡೆದು ಬರೋಡಾಗೆ ಆಘಾತ ನೀಡಿದರು. ಅಭಿಲಾಶ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ ಕೂಡ ವಿಕೆಟ್ ಪಡೆದು ಕರ್ನಾಟಕ ಮೇಲುಗೈ ಸಾಧಿಸಿತು. ಭಾರ್ಗವ್ ಭಟ್ 12 ಎಸೆತಗಳಲ್ಲಿ 20 ರನ್ ಗಳಿಸಿ ಬರೋಡಾಗೆ ಗೆಲುವಿನ ಭರವಸೆ ಮೂಡಿಸಿದರು. ಕೊನೆಯ ಓವರ್ ನಲ್ಲಿ ಅಭಿಲಾಶ್ ಶೆಟ್ಟಿ ಉತ್ತಮ ಬೌಲಿಂಗ್ ಮಾಡುವ ಮೂಲಕ ರಾಜ್ಯಕ್ಕೆ 5 ರನ್‌ಗಳ ರೋಚಕ ಗೆಲುವು ತಂದುಕೊಟ್ಟರು.












Click it and Unblock the Notifications