Ranji Trophy: ಚಂಡೀಗಢ ವಿರುದ್ಧದ ಪಂದ್ಯ ಡ್ರಾ; ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ
ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಚಂಡೀಗಢ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 296 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡ ಕರ್ನಾಟಕ, ಚಂಡೀಗಢ ತಂಡವನ್ನು ಆಲೌಟ್ ಮಾಡುವಲ್ಲಿ ವಿಫಲವಾಯಿತು. ನಾಲ್ಕನೇ ದಿನ ಕರ್ನಾಟಕ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿದ ಚಂಡೀಗಢ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಚಂಡೀಗಢ ಮೊದಲ ಇನ್ನಿಂಗ್ಸ್‌ನಲ್ಲಿ 267 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 563 ರನ್ ಗಳಿಸಿ 296 ರನ್‌ಗಳ ಮುನ್ನಡೆಯೊಂದಿಗೆ ಡಿಕ್ಲೇರ್ ಮಾಡಿಕೊಂಡಿತು. ಮನೀಶ್ ಪಾಂಡೆ, ಶ್ರೀನಿವಾಸ್ ಶರತ್, ವಿಜಯ್ ಕುಮಾರ್ ವೈಶಾಖ್ ಶತಕ ಬಾರಿಸುವ ಮೂಲಕ ಕರ್ನಾಟಕ ತಂಡ ಬೃಹತ್ ಮೊತ್ತ ಕಲೆ ಹಾಕಲು ಕಾರಣವಾಗಿದ್ದರು. ನಾಯಕ ಮಯಾಂಕ್ ಅಗರ್ವಾಲ್ ಮತ್ತು ಹಾರ್ದಿಕ್ ರಾಜ್ ಅರ್ಧಶತಕದ ಕೊಡುಗೆ ನೀಡಿದ್ದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮಾಡಿದ ಚಂಡೀಗಢ ವಿಕೆಟ್ ಕಳೆದುಕೊಳ್ಳದೇ ನಾಲ್ಕನೇ ದಿನ ಬ್ಯಾಟಿಂಗ್ ಮಾಡಿತು. 80 ಓವರ್ ಬ್ಯಾಟಿಂಗ್ ಮಾಡಿದ ಚಂಡೀಗಢ 5 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿದ್ದಾಗ, ಎರಡೂ ತಂಡಗಳ ಒಪ್ಪಿಗೆ ಬಳಿಕ ಡ್ರಾ ಎಂದು ಘೋಷಿಸಲಾಯಿತು.
ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ ಕರ್ನಾಟಕ
ಚಂಡೀಗಢ ವಿರುದ್ಧದ ಪಂದ್ಯ ಡ್ರಾ ಮಾಡಿಕೊಳ್ಳುವ ಮೂಲಕ ಕರ್ನಾಟಕ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಸಿ ಗುಂಪಿನಲ್ಲಿ ಕರ್ನಾಟಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಮುಂದಿನ ಹಂತಕ್ಕೆ ಪ್ರವೇಶಿಸಿದೆ.
ಕರ್ನಾಟಕ ತಂಡ ಆಡಿರುವ 7 ಪಂದ್ಯಗಳಲ್ಲಿ 3 ಪಂದ್ಯ ಗೆದ್ದು 3 ಪಂದ್ಯ ಡ್ರಾ ಮಾಡಿಕೊಂಡಿದ್ದು ಒಂದು ಪಂದ್ಯದಲ್ಲಿ ಮಾತ್ರ ಸೋಲನುಭವಿಸಿದೆ. ಈ ಮೂಲಕ 27 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ತಮಿಳುನಾಡು ತಂಡ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲ್ಲುವ ಮೂಲಕ ಮೊದಲ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.
ಕರ್ನಾಟಕ ಕ್ವಾಟರ್ ಫೈನಲ್‌ನಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ. ಫೆಬ್ರವರಿ 23ರಂದು ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಲಿವೆ. ವಿದರ್ಭದಲ್ಲಿ ಕರ್ನಾಟಕ ಅತಿಥೇಯ ತಂಡವನ್ನು ಎದುರಿಸಲಿದ್ದು, ದೊಡ್ಡ ಸವಾಲು ಮುಂದಿದೆ.












Click it and Unblock the Notifications